image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿಯಲ್ಲಿ ನಡೆದ ಸಿಖ್​ ವಿರೋಧಿ ದಂಗೆಯಲ್ಲಿ ನಾನು ಭಾಗಿಯಾಗಿರಲಿಲ್ಲ : ಸಜ್ಜನ್​ ಕುಮಾರ್​

ದೆಹಲಿಯಲ್ಲಿ ನಡೆದ ಸಿಖ್​ ವಿರೋಧಿ ದಂಗೆಯಲ್ಲಿ ನಾನು ಭಾಗಿಯಾಗಿರಲಿಲ್ಲ : ಸಜ್ಜನ್​ ಕುಮಾರ್​

ನವದೆಹಲಿ: ನನ್ನ ಮೇಲೆ ಹೊರಿಸಿರುವ ಆರೋಪಗಳಲ್ಲಿ ನಾನೆಂದೂ ಭಾಗಿಯಾಗಿಲ್ಲ. ನಾನು ಅಮಾಯಕ ಎಂದು 1984ರ ಸಿಖ್​ ವಿರೋಧಿ ದಂಗೆಯ ವೇಳೆ ದೆಹಲಿಯ ಜನಕಪುರಿ ಮತ್ತು ವಿಕಾಸ್​ ಪುರಿಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಹಾಗೂ ಮಾಜಿ ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್ ಇಂದು​ ಕೋರ್ಟ್ ನಲ್ಲಿ ತಮ್ಮ ಹೇಳಿಕೆ ದಾಖಲಿಸಿದರು. ಇಲ್ಲಿನ ರೋಸ್​​ ಅವೆನ್ಯೂ ಕೋರ್ಟ್​ನಲ್ಲಿ ವಿಶೇಷ ನ್ಯಾಯಮೂರ್ತಿ ದಿಗ್​ ವಿನಯ್​ ​ ಸಿಂಗ್​ ಅವರ ಮುಂದೆ ಹಾಜರಾದ 77 ವರ್ಷದ ಸಜ್ಜನ್ ಕುಮಾರ್​, ನಾನು ಅಮಾಯಕ. ಇಂಥ ಅಪರಾಧಗಳಲ್ಲಿ ನಾನು ಭಾಗಿಯಾಗಿರಲಿಲ್ಲ. ಇದಕ್ಕೆ ನನ್ನಲ್ಲಿ ಎಲ್ಲಾ ಸಾಕ್ಷ್ಯಗಳಿವೆ ಎಂದು ವಿಚಾರಣೆ ವೇಳೆ ಹೇಳಿಕೆಯನ್ನು ಔಪಚಾರಿಕವಾಗಿ ದಾಖಲಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 29ಕ್ಕೆ ನಿಗದಿಪಡಿಸಿದೆ.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಬೆನ್ನಲ್ಲಿ ಸಿಖ್​ ವಿರೋಧಿ ದಂಗೆಗಳು ನಡೆದಿದ್ದು ದೆಹಲಿಯ ಇತಿಹಾಸದಲ್ಲೇ ಕರಾಳ ಘಟನೆಗಳಲ್ಲಿ ಒಂದಾಗಿದೆ. ಜನಕಪುರಿಯಲ್ಲಿ ಸೋಹನ್​ ಸಿಂಗ್​ ಮತ್ತು ಅವರ ಅಳಿಯ ಅವತಾರ್​ ಸಿಂಗ್​ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರತ್ಯೇಕ ಪ್ರಕರಣದಲ್ಲಿ ವಿಕಸ್​ಪುರಿ ಪೊಲೀಸ್​ ಠಾಣೆಯಲ್ಲಿ ಮತ್ತೊಬ್ಬ ವ್ಯಕ್ತಿ ಗುರುಚರಣ್​ ಸಿಂಗ್ ಎಂಬವರಿಗೆ ಬೆಂಕಿ ಹಚ್ಚಲಾಗಿತ್ತು. ಗಂಭೀರ ಗಾಯದಿಂದ ಅವರು ಸಾವನ್ನಪ್ಪಿದ್ದರು. ದಶಕಗಳ ಬಳಿಕ 2015ರಲ್ಲಿ ವಿಶೇಷ ತನಿಖಾ ತಂಡ ಪ್ರಕರಣದ ಮರು ತನಿಖೆ ಆರಂಭಿಸಿತು. ಇದರ ಭಾಗವಾಗಿ 2018ರಲ್ಲಿ ಸಜ್ಜನ್​ ಕುಮಾರ್​ರನ್ನು ಪಾಲಿಗ್ರಾಫ್​ ಪರೀಕ್ಷೆಗೆ ಒಳಪಡಿಸಲಾಯಿತು.

2024ರ ನವೆಂಬರ್​ನಲ್ಲಿ ಸಂತ್ರಸ್ತೆ ಮನಜಿತ್​ ಕೌರ್ ಅವರು, ಸಜ್ಜನ್ ಕುಮಾರ್ ಅವರನ್ನು ಘಟನಾ ಸ್ಥಳದಲ್ಲಿ ವೈಯಕ್ತಿಕವಾಗಿ ನೋಡಿಲ್ಲ. ಆದರೆ ಗುಂಪಿನಲ್ಲಿದ್ದ ಜನರು ಅವರ ಹೆಸರನ್ನು ಪದೇ ಪದೇ ಕೂಗುತ್ತಿರುವುದನ್ನು ಕೇಳಿದ್ದಾಗಿ ಕೋರ್ಟ್​ ಮುಂದೆ ಹೇಳಿಕೆ ದಾಖಲಿಸಿದ್ದರು. 2023ರ ಆಗಸ್ಟ್​ನಲ್ಲಿ ಕೋರ್ಟ್​​ ಐಪಿಸಿ ಸೆಕ್ಷನ್​ ಅಡಿಯಲ್ಲಿ ಸಜ್ಜನ್​ ಕುಮಾರ್​ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಿತು. ಆದರೆ ಎಸ್​ಐಟಿ ಈ ಹಿಂದೆ ಅನ್ವಯಿಸಿದ್ದ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಆರೋಪವನ್ನು ಕೈಬಿಟ್ಟಿತು. ಈ ಕಾನೂನು ಹೋರಾಟದ ಹೊರತಾಗಿ, ಈ ವರ್ಷ ಫೆಬ್ರವರಿ 25ರಂದು, ಸರಸ್ವತಿ ವಿಹಾರ್‌ನಲ್ಲಿ ನಡೆದ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Category
ಕರಾವಳಿ ತರಂಗಿಣಿ