image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಯೋತ್ಪಾದಕರ ವಿರುದ್ಧ ನಿರ್ಬಂಧ ಹೇರಲು ಯಾವುದೇ ಹಿಂಜರಿಕೆ ಇರಬಾರದು : ಮೋದಿ

ಭಯೋತ್ಪಾದಕರ ವಿರುದ್ಧ ನಿರ್ಬಂಧ ಹೇರಲು ಯಾವುದೇ ಹಿಂಜರಿಕೆ ಇರಬಾರದು : ಮೋದಿ

ಬ್ರೆಜಿಲ್: ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಲ್ಲಿ ಯಾವುದೇ ಹಿಂಜರಿಕೆ ಇರಬಾರದು ಮತ್ತು ಭಯೋತ್ಪಾದನೆಯಲ್ಲಿ ನಲುಗಿದವರು ಮತ್ತು ಅದರ ಬೆಂಬಲಿಗರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪ್ರತಿಪಾದನೆ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಯ ಈ ಬೆದರಿಕೆಯನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನಗಳಿಗೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಶಾಂತಿ ಮತ್ತು ಭದ್ರತೆಯ ಕುರಿತಾದ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಕ್ರೂರ ಮತ್ತು ಹೇಡಿತನದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದ ಆತ್ಮ, ಗುರುತು ಮತ್ತು ಘನತೆಯ ಮೇಲಾದ ನೇರ ಹೊಡೆತ ಎಂದು ಹೇಳಿದರು. ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ಅತ್ಯಂತ ಗಂಭೀರ ಸವಾಲು ಎಂದು ಬಣ್ಣಿಸಿದ ಪ್ರಧಾನಿ, ಏಪ್ರಿಲ್ 22 ರ ದಾಳಿಯು ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವೀಯತೆಗೆ ಒಂದು ಹೊಡೆತ ಎಂದು ಕಳವಳ ವ್ಯಕ್ತಪಡಿಸಿದರು.

ಬ್ರೆಜಿಲ್‌ನ ಈ ಕಡಲತೀರದ ನಗರದಲ್ಲಿ ನಡೆದ ಶೃಂಗಸಭೆಯ ಮೊದಲ ದಿನದಂದು ಬ್ರಿಕ್ಸ್‌ನ ಉನ್ನತ ನಾಯಕರು ಜಗತ್ತು ಎದುರಿಸುತ್ತಿರುವ ಹಲವು ಸವಾಲುಗಳ ಕುರಿತು ಚರ್ಚೆ ನಡೆಸಿದರು. ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ತತ್ವ ವಾಗಿರಬೇಕು, ಕೇವಲ ಅನುಕೂಲಕರ ವಿಷಯವಾಗಿರಬಾರದು ಎಂದು ಮೋದಿ ಶೃಂಗದಲ್ಲಿ ಬಲವಾಗಿ ಪ್ರತಿಪಾದಿಸಿದರು. ಮೇ 7-10 ರಂದು ಭಾರತ ಮತ್ತು ಪಾಕಿಸ್ತಾನಿ ಮಿಲಿಟರಿಗಳ ನಡುವಿನ ಸಂಘರ್ಷದ ಸಮಯದಲ್ಲಿ ಇಸ್ಲಾಮಾಬಾದ್‌ಗೆ ಮಿಲಿಟರಿ ಸಾಮಗ್ರಿಗಳೊಂದಿಗೆ ಬೆಂಬಲ ನೀಡಿದ ಚೀನಾವನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಈ ಮಾತುಗಳನ್ನು ನೇರವಾಗಿಯೇ ಹೇಳಿದ್ದಾರೆ. ಯಾವ ದೇಶದಲ್ಲಿ ದಾಳಿ ನಡೆದಿದೆ, ಯಾರ ವಿರುದ್ಧ ಎಂದು ನಾವು ಮೊದಲು ನೋಡಿದರೆ ಅದು ಮಾನವೀಯತೆಗೆ ಮಾಡಿದ ದ್ರೋಹವಾಗುತ್ತದೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸಲು ಯಾವುದೇ ಹಿಂಜರಿಕೆ ಇರಬಾರದು ಎಂದು ಇದೇ ವೇಳೆ ಅವರು ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಪಟ್ಟಿ ಮಾಡಲು ಚೀನಾ ಅಡ್ಡಿ ಪಡಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂಜರಿಕೆಯಿಲ್ಲದೆ ಭಯೋತ್ಪಾದಕರ ಮೇಲೆ ನಿರ್ಬಂಧಗಳನ್ನು ವಿಧಿಸಲು ಮೋದಿ ಕರೆ ನೀಡಿದ್ದಾರೆ. ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ, ಭಯೋತ್ಪಾದನೆಗೆ ಮೌನ ಒಪ್ಪಿಗೆ ನೀಡುವುದು, ಭಯೋತ್ಪಾದನೆ ಅಥವಾ ಭಯೋತ್ಪಾದಕರನ್ನು ಬೆಂಬಲಿಸುವುದು, ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹವಲ್ಲ ಎಂದು ಅವರು ಎಚ್ಚರಿಕೆ ಸಹ ರವಾನಿಸಿದರು.

Category
ಕರಾವಳಿ ತರಂಗಿಣಿ