ಹಿಮಾಚಲ ಪ್ರದೇಶ : ಅವಲೋಕಿತೇಶ್ವರನ ಆಶೀರ್ವಾದ ನನ್ನೊಂದಿಗಿದ್ದು, ಇನ್ನೂ ದಶಕಗಳ ಕಾಲ ಬದುಕುವ ಕನಸು ಕಂಡಿದ್ದೇನೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಹೇಳಿದರು. ಮೆಕ್ಲಿಯೋಡ್ಗಂಜ್ನ ಪ್ರಮುಖ ದಲೈ ಲಾಮಾ ದೇವಾಲಯವಾದ ತ್ಸುಗ್ಲಾಗ್ಖಾಂಗ್ನಲ್ಲಿ ಭಾನುವಾರ ತಮ್ಮ 90ನೇ ಜನ್ಮದಿನದ ಸಂಭ್ರಮ ನಡೆಯಲಿದ್ದು, ಇದಕ್ಕೂ ಮುನ್ನ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಅವರು ಮಾತನಾಡಿದರು. 'ಹಲವು ಭವಿಷ್ಯವಾಣಿಗಳನ್ನು ನೋಡುವಾಗ, ನನಗೆ ಅವಲೋಕಿತೇಶ್ವರನ ಆಶೀರ್ವಾದವಿದೆ ಎಂದು ಅನಿಸುತ್ತದೆ. ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30-40 ವರ್ಷಗಳ ಕಾಲ ಬದುಕಬೇಕೆಂದು ಬಯಸುತ್ತೇನೆ. ನಿಮ್ಮ ಪ್ರಾರ್ಥನೆ ಇಲ್ಲಿಯವರೆಗೆ ಫಲ ನೀಡಿದೆ' ಎಂದು ತಿಳಿಸಿದರು.
'ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ವಾಸಿಸುತ್ತಿದ್ದರೂ, ಧರ್ಮಶಾಲಾದಲ್ಲಿ ವಾಸಿಸುವ ಜನರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲು ಸಾಧ್ಯವಾಯಿತು. ನನ್ನಿಂದ ಸಾಧ್ಯವಾದಷ್ಟು ಜನರಿಗೆ ಪ್ರಯೋಜನವನ್ನು ನೀಡಲು ಮತ್ತು ಸೇವೆ ಮಾಡಲು ನಾನು ಉದ್ದೇಶಿಸಿದ್ದೇನೆ' ಎಂದು ಅವರು ಹೇಳಿದ್ದಾರೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ಸಂಸ್ಥೆಯು ತಮ್ಮ ಮರಣದ ನಂತರವೂ ಮುಂದುವರಿಯಲಿದೆ ಎಂದು ಅವರು ಜುಲೈ 2 ರಂದು ಘೋಷಿಸಿದ್ದರು. ಅವರು ಸ್ಥಾಪಿಸಿದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಭವಿಷ್ಯದ ದಲೈ ಲಾಮಾ ಅವರನ್ನು ಗುರುತಿಸುವ ಏಕೈಕ ಅಧಿಕಾರವನ್ನು ಹೊಂದಿದೆ ಎಂದು ಹೇಳಿದ್ದರು. ದಲೈ ಲಾಮಾ ಅವರ ಸಂಸ್ಥೆ ಮುಂದುವರಿಯಬೇಕೆಂದು ವಿನಂತಿಸುತ್ತಾ ವಿಶ್ವದ ಇತರ ಭಾಗಗಳಲ್ಲಿ ವಾಸಿಸುವ ಟಿಬೆಟಿಯನ್ನರು ಮತ್ತು ಟಿಬೆಟಿಯನ್ ಬೌದ್ಧರಿಂದ ನನಗೆ ವಿವಿಧ ಸಂದೇಶಗಳು ಬಂದಿವೆ. ದಲೈ ಲಾಮಾ ಅವರ ಸಂಸ್ಥೆ ಮುಂದುವರಿಯುತ್ತದೆ ಎಂದು ನಾನು ದೃಢೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.