ಹಿಮಾಚಲ ಪ್ರದೇಶ : ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್(ಪಿಡಿಎಸ್) ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆಗಾಗಿ ಆಧಾರ್ ಬೇಸ್ಡ್ ಫೇಸ್ ಅಥೆಂಟಿಕೇಷನ್ (ಆಧಾರ್ ಆಧಾರಿತ ಮುಖ ದೃಢೀಕರಣ) ಅನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ಹಿಮಾಚಲ ಪ್ರದೇಶ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಒಟಿಪಿ ಆಧಾರಿತ ಅಥವಾ ಬಯೋಮೆಟ್ರಿಕ್ ವಿಧಾನಗಳನ್ನು ಬಳಸಿಕೊಂಡು ದೃಢೀಕರಣ ನಡೆಸಲಾಗುತ್ತಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ಮತ್ತು ಆಡಳಿತ ಇಲಾಖೆ (DDTG) ಜುಲೈ 1ರಿಂದ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರವನ್ನು ವಿತರಿಸಲು ಆಧಾರ್ ಆಧಾರಿತ ಮುಖ ದೃಢೀಕರಣವನ್ನು ಪರಿಚಯಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರ ಮುಖಗಳನ್ನು ಸ್ಕ್ಯಾನ್ ಮಾಡಿದ ನಂತರ ಪಡಿತರವನ್ನು ನೀಡಲಾಗುತ್ತದೆ.
ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರ ಗೋಕುಲ್ ಬುಟೈಲ್ ಪ್ರತಿಕ್ರಿಯಿಸಿ, ''ಎಸ್ಎಂಎಸ್ ವಿತರಣಾ ವೈಫಲ್ಯಗಳು ಮತ್ತು UIDAI ಕಡೆಯಿಂದ ಬಯೋಮೆಟ್ರಿಕ್ ಹೊಂದಾಣಿಕೆಯಾಗದಿದ್ದಾಗ ಆಗಾಗ್ಗೆ ಎದುರಾಗುವ ಸವಾಲುಗಳು ಫಲಾನುಭವಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತಿವೆ'' ಎಂದರು. 'ಆಧಾರ್ ಬೇಸ್ಡ್ ಫೇಸ್ ಅಥೆಂಟಿಕೇಷನ್ (FaceAuth) ಕಾರ್ಯವಿಧಾನದ ಪ್ರಾರಂಭದೊಂದಿಗೆ, ಪಡಿತರ ವಿತರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಇದು ನ್ಯಾಯಬೆಲೆ ಅಂಗಡಿ (ಎಫ್‌ಪಿಎಸ್) ಮಾಲೀಕರ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಅಪ್ಲಿಕೇಶನ್ ಮೂಲಕ ಮೊಬೈಲ್ ಕ್ಯಾಮರಾವನ್ನು ಬಳಸುತ್ತದೆ, ಇದು ಫಲಾನುಭವಿಗಳ ಮುಖದ ದೃಢೀಕರಣ ಮಾಡುತ್ತದೆ'' ಎಂದು ಹೇಳಿದರು.
''ಹಿಮಾಚಲ ಪ್ರದೇಶದ ಡಿಜಿಟಲ್ ತಂತ್ರಜ್ಞಾನ ಮತ್ತು ಆಡಳಿತ ಇಲಾಖೆ (DDTG), ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (PDS) ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆಗಾಗಿ ಆಧಾರ್ ಆಧಾರಿತ ಮುಖ ದೃಢೀಕರಣವನ್ನು (FaceAuth) ಪರಿಚಯಿಸಿದೆ. ಈ ಉಪಕ್ರಮವು ಪಡಿತರ ವಿತರಣೆಯನ್ನು ಹೆಚ್ಚಿಸಲು ಮತ್ತು ಅಗತ್ಯ ಸೇವೆಗಳನ್ನು ಸಾರ್ವಜನಿಕರು ಪಡೆಯುವುದನ್ನು ಉತ್ತೇಜಿಸಲು, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ರಾಜ್ಯದ ಬದ್ಧತೆಯನ್ನು ತೋರಿಸುತ್ತದೆ' ಎಂದು ತಿಳಿಸಿದರು. ಜೂನ್ 28ರಿಂದ ರಾಜ್ಯಾದ್ಯಂತ ಮುಖ ದೃಢೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಆಹಾರ ನಾಗರಿಕ ಪೂರೈಕೆ ಇಲಾಖೆಯ ನಿರ್ದೇಶಕ ರಾಮ್ ಕುಮಾರ್ ಗೌವ್ ಹೇಳಿದರು. ರಾಜ್ಯ ಸರ್ಕಾರದ ಪ್ರಯತ್ನಗಳಿಂದ ಇದು ಸಾಧ್ಯವಾಯಿತು. ಹಿಮಾಚಲ ಪ್ರದೇಶದಲ್ಲಿ ಪಡಿತರ ಚೀಟಿದಾರರ ಸಂಖ್ಯೆ 19,40,968 ಇದ್ದು, ಈಗ ಫೇಸ್ ಅಥೆಂಟಿಕೇಷನ್ ಆ್ಯಪ್ ಮೂಲಕ ನ್ಯಾಯಬೆಲೆ ಅಂಗಡಿಯಲ್ಲಿ ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ.