ಮಹಾರಾಷ್ಟ್ರ : ಇಲ್ಲಿನ ಸರ್ಕಾರ ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿದ ಎರಡು ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸಿದ ಹಿನ್ನೆಲೆ ಮುಂಬೈನಲ್ಲಿಂದು ಮರಾಠಿ ವಿಜಯೋತ್ಸವ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಶಿವಸೇನೆ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಒಂದೇ ವೇದಿಕೆಯಲ್ಲಿ ಕಾಣಿಕೊಂಡಿದ್ದಾರೆ. ಸದ್ಯ ರ್ಯಾಲಿಯಲ್ಲಿ ಠಾಕ್ರೆ ಸಹೋದರರು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಕೆಲವು ತಿಂಗಳುಗಳಿಂದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು. ಈ ಸಂದರ್ಭದಲ್ಲಿ, ಮರಾಠಿ ವಿಜಯೋತ್ಸವ ರ್ಯಾಲಿ ಮಹತ್ವ ಪಡೆದಿದೆ.
ಶಾಸಕ ಆದಿತ್ಯ ಠಾಕ್ರೆ ಮತ್ತು ಎಂಎನ್ಎಸ್ ನಾಯಕರು ರ್ಯಾಲಿಯ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂಬಂಧ ಆದಿತ್ಯ ಠಾಕ್ರೆ ಎಂಎನ್ಎಸ್ ನಾಯಕರೊಂದಿಗೆ ಸಭೆ ನಡೆಸಿದರು. ಈ ವೇಳೆ ವರುಣ್ ಸರ್ದೇಸಾಯಿ ಮತ್ತು ಅನಿಲ್ ಪರಬ್ ಆದಿತ್ಯ ಠಾಕ್ರೆ ಅವರೊಂದಿಗೆ ಇದ್ದರು. ಎಂಎನ್ಎಸ್ನ ಸಂದೀಪ್ ದೇಶಪಾಂಡೆ, ಬಾಲಾ ನಂದಗಾಂವ್ಕರ್, ನಿತಿನ್ ಸರ್ದೇಸಾಯಿ ಮತ್ತು ಅಭಿಜೀತ್ ಪನ್ಸೆ ಸಭೆಯಲ್ಲಿ ಹಾಜರಿದ್ದರು. ಮರಾಠಿ ವಿಜಯೋತ್ಸವದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ(ಯುಟಿಬಿ) ಸಂಸದ ಸಂಜಯ್ ರಾವತ್," ದೇವೇಂದ್ರ ಫಡ್ನವೀಸ್ ಹುಟ್ಟುವುದಕ್ಕೂ ಮೊದಲೇ ಶಿವಸೇನೆ ಹುಟ್ಟಿತು. ಇದು ಯೋಜಿತ ಕಾರ್ಯಕ್ರಮವಲ್ಲ. ಬದಲಾಗಿ, ರಾಜ್ಯ ಸರ್ಕಾರ ತ್ರಿಭಾಷಾ ಸೂತ್ರದ ಕುರಿತಾದ ಎರಡು ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸಿತು. ಅದಕ್ಕಾಗಿಯೇ ಈ ಮರಾಠಿ ವಿಜಯೋತ್ಸವವನ್ನು ನಡೆಸಲಾಗುತ್ತಿದೆ" ಎಂದಿದ್ದಾರೆ.
"ರಾಜ್ಯಾದ್ಯಂತ ಸಾವಿರಾರು ಜನರು ಈ ರ್ಯಾಲಿ ಆಗಮಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಟ್ಟಾಗಿ ರ್ಯಾಲಿಗೆ ಬಂದು ನಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಾವು ಈ ರ್ಯಾಲಿಗಾಗಿ ಕಾತರದಿಂದ ಕಾಯುತ್ತಿದ್ದೇವೆ. ಹಲವು ವರ್ಷಗಳಿಂದ ಉದ್ಧವ್ ಮತ್ತು ರಾಜ್ ಠಾಕ್ರೆ ಒಂದಾಗಬೇಕು ಎಂದು ನಾವು ಬಯಸುತ್ತಿದ್ದೆವು. ಕೆಲ ವರ್ಷಗಳಿಂದ ಠಾಕ್ರೆ ಸಹೋದರರನ್ನು ಒಟ್ಟುಗೂಡಿಸುವ ಪ್ರಯತ್ನ ನಡೆದವು. ಆದರೆ, ಕೆಲವು ಕಾರಣಗಳಿಂದಾಗಿ, ಠಾಕ್ರೆ ಸಹೋದರರು ಒಟ್ಟಿಗೆ ಒಂದಾಗಲಿಲ್ಲ. ಆದರೆ, ಠಾಕ್ರೆ ಸಹೋದರರು ಈಗ ಮರಾಠಿ ಭಾಷೆಯ ವಿಷಯವಾಗಿ ಒಂದಾಗಿದ್ದಾರೆ. ಇದು ನಮಗೆ ಹಬ್ಬ" ಎಂದು ಹೇಳಿದ್ದಾರೆ.