ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ 'ಒನ್ ಬಿಗ್ ಬ್ಯೂಟಿಫುಲ್ ಬಿಲ್'ಗೆ ಕಾನೂನಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಈ ಮೂಲಕ ಇದು ಕಾನೂನಾಗಿ ಜಾರಿಯಾಗಿದೆ. ಈ ಹೊಸ ಕಾನೂನಿನ ಪ್ರಕಾರ ತೆರಿಗೆ ಕಡಿತ ಮತ್ತು ಪೆಂಟಗನ್ ಮತ್ತು ಗಡಿ ಭದ್ರತೆಗೆ ಹಣಕಾಸು ಹೆಚ್ಚಳ ಮಾಡುವುದು ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರಲಿವೆ. ರಿಪಬ್ಲಿಕನ್ ಸಂಸದರೊಂದಿಗೆ ತಿಂಗಳುಗಳ ಕಾಲ ನಡೆದ ಚರ್ಚೆ, ಸಂವಾದ ಹಾಗೂ ತಿದ್ದುಪಡಿಗಳ ನಂತರ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದು, ಟ್ರಂಪ್ ಆಡಳಿತಕ್ಕೆ ದೊರೆತ ಪ್ರಮುಖ ವಿಜಯವಾಗಿದೆ ಎಂದು ದಿ ಹಿಲ್ ವರದಿ ಮಾಡಿದೆ.
ಅಮೆರಿಕದ ಸ್ವಾತಂತ್ರ್ಯ ದಿನದಂದು ಶ್ವೇತಭವನದಲ್ಲಿ ಟ್ರಂಪ್ ಈ ಮಸೂದೆಗೆ ಸಹಿ ಹಾಕಿದರು. ಜುಲೈ 4 ರೊಳಗೆ ಶಾಸನವನ್ನು ಅಂತಿಮಗೊಳಿಸುವುದು ಟ್ರಂಪ್ ಆಡಳಿತದ ಪ್ರಮುಖ ಗುರಿಯಾಗಿತ್ತು ಎಂದು ದಿ ಹಿಲ್ ವರದಿ ಹೇಳಿದೆ. ನಾವು ಭರವಸೆಗಳನ್ನು ನೀಡಿದ್ದೆವು, ಈಗ ಆ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಟ್ರಂಪ್ ಘೋಷಿಸಿದರು. ಇದು ಸ್ವಾತಂತ್ರ್ಯದ ದಿನ ಸಿಕ್ಕ ಪ್ರಜಾಪ್ರಭುತ್ವದ ವಿಜಯ. ಇದರಿಂದ ಜನರು ಸಂತೋಷವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ. ಸಹಿ ಸಮಾರಂಭದಲ್ಲಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಕ್ಯಾಬಿನೆಟ್ ಸದಸ್ಯರು ಮತ್ತು ಸ್ಪೀಕರ್ ಮೈಕ್ ಜಾನ್ಸನ್, ಹೌಸ್ ಮೆಜಾರಿಟಿ ನಾಯಕ ಸ್ಟೀವ್ ಸ್ಕಾಲೈಸ್, ಹೌಸ್ ಮೆಜಾರಿಟಿ ವಿಪ್ ಟಾಮ್ ಎಮ್ಮರ್ ಮತ್ತು ಪ್ರತಿನಿಧಿ ಜೇಸನ್ ಸ್ಮಿತ್ ಸೇರಿದಂತೆ ಹಲವಾರು ರಿಪಬ್ಲಿಕನ್ ಸಂಸದರು ಭಾಗವಹಿಸಿದ್ದರು. ಈ ವೇಳೆ ಎರಡು ಬಿ-2 ಬಾಂಬರ್ಗಳ ಹಾರಾಟವೂ ನಡೆಯಿತು. ಕಳೆದ ತಿಂಗಳು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿದಾಗ ಬಳಸಲಾದ ಅದೇ ರೀತಿಯ ವಿಮಾನಗಳು ಅವಾಗಿದ್ದವು.
ಅಮೆರಿಕ ಸಂಸತ್ ನಲ್ಲಿ ನಡೆದ ಮತದಾನದಲ್ಲಿ 218-214 ಅಂತರದೊಂದಿಗೆ ನಾಲ್ಕು ಮತಗಳಿಂದ ಮಸೂದೆಗೆ ಹೌಸ್ ಆಫ್ ರೆಪ್ರೆಸೆಂಟೆಟಿವ್ ಅಂಗೀಕಾರ ನೀಡಿತು. ಇಬ್ಬರು ರಿಪಬ್ಲಿಕನ್ನ ಸದಸ್ಯರಾದ ಥಾಮಸ್ ಮ್ಯಾಸಿ ಮತ್ತು ಬ್ರಿಯಾನ್ ಫಿಟ್ಜ್ಪ್ಯಾಟ್ರಿಕ್ ವಿಧೇಯಕದ ವಿರುದ್ಧ ಮತ ಚಲಾಯಿಸಿದರು ಎಂದು ದಿ ಹಿಲ್ ವರದಿ ಮಾಡಿದೆ. ಮಸೂದೆ ಅಂಗೀಕಾರದ ನಂತರ ಡೊನಾಲ್ಡ್ ಟ್ರಂಪ್, ಜನಪ್ರತಿನಿಧಿಗಳ ಸಭೆಯಲ್ಲಿನ ರಿಪಬ್ಲಿಕನ್ನರು ಒಂದು ದೊಡ್ಡ ಸುಂದರ ಮಸೂದೆಯನ್ನು ಕಾಯ್ದೆಯಾಗಿ ಅಂಗೀಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಮ್ಮ ಪಕ್ಷವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಿನಿಂದ ಕೂಡಿದೆ ಎಂದು ಬಣ್ಣಿಸಿದರು. ಮಸೂದೆಯನ್ನು ಮಂಗಳವಾರ ಅಮೆರಿಕದ ಸೆನೆಟ್ನಲ್ಲಿ 51-50 ಮತಗಳಿಂದ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಟೈ-ಬ್ರೇಕಿಂಗ್ ಮತ ಚಲಾಯಿಸುವ ಮೂಲಕ ವಿಧೇಯಕವನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.