ಬಿಹಾರ : ಸೀತಾಮಾತೆ ಜನಿಸಿದ ಪವಿತ್ರ ಸ್ಥಳ ಇಲ್ಲಿನ 'ಪುನೌರಾ ಧಾಮ್' ಅನ್ನು ವಿಶ್ವ ದರ್ಜೆಯ ಆಧ್ಯಾತ್ಮಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಬಿಹಾರ ಸರ್ಕಾರದ ಯೋಜನೆ ಕುರಿತು ದೇಗುಲದ ಅರ್ಚಕ ಕೌಶಲ್ ಕಿಶೋರ್ ದಾಸ್ ಮಾತನಾಡಿದ್ದಾರೆ. ಪಾಟ್ನಾದಿಂದ 140 ಕಿ.ಮೀ ದೂರದಲ್ಲಿರುವ ಈ ದೇಗುಲದಲ್ಲಿ 82 ವರ್ಷದ ಕೌಶಲ್ ಕಿಶೋರ್ ದಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. "ಸೀತಾಮಾತೆಯ ಜನ್ಮಸ್ಥಳದ ಅಭಿವೃದ್ಧಿ ಸುದ್ದಿ ನನಗೆ ಸಂತಸ ತಂದಿದೆ. ಇದು ನಮ್ಮ ದೀರ್ಘಕಾಲದ ಕನಸು. ಆದರೆ, ಯೋಜನೆಯ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. "ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಧಾರ್ಮಿಕ ಟ್ರಸ್ಟ್ ಅನ್ನು ತೆಗೆದು ಹಾಕಿ ಹೊಸ ಟ್ರಸ್ಟ್ ರೂಪಿಸಿದ್ದು, ಅದರಲ್ಲಿ ನಾನೂ ಕೂಡ ಸದಸ್ಯ. ಹೀಗಿದ್ದರೂ ಈ ವಿಚಾರ ಪತ್ರಿಕೆಗಳ ಮೂಲಕ ನನಗೆ ತಿಳಿಯಿತು. ಜಿಲ್ಲಾಡಳಿತದ ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ" ಎಂದರು. ಅರ್ಚಕರ ಉತ್ತರಾಧಿಕಾರಿ ರಾಮ್ ಕುಮಾರ್ ದಾಸ್, ಇತರ ಪುರೋಹಿತರು, ಉಸ್ತುವಾರಿಗಳು, ಅಡುಗೆಯವರು ಮತ್ತು ತೋಟಗಾರರು ಸೇರಿದಂತೆ ಸುಮಾರು 22 ಜನರು ಇಲ್ಲಿದ್ದಾರೆ.
"ಮಹಂತ್ (ಅರ್ಚಕರು) ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗುವುದು. ನೂರಾರು ವರ್ಷಗಳಿಂದ ಈ ಆಚರಣೆ ಮುಂದುವರೆದಿದೆ. ಅದನ್ನು ನಿರ್ವಹಣೆ ಮಾಡಬೇಕಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಏನಾಗುತ್ತದೆ ಎಂದು ನಮಗೆ ತಿಳಿಯುತ್ತಿಲ್ಲ" ಎಂದು ರಾಮ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ಸರ್ಕಾರ ಈ ವರ್ಷ ಮೇ ತಿಂಗಳಲ್ಲಿ ಸೀತೆಯ ಜನ್ಮಸ್ಥಳವನ್ನು ಪುನರ್‌ಅಭಿವೃದ್ಧಿ ಮಾಡುವ ಉದ್ದೇಶದಿಂದ 9 ಸದಸ್ಯರ ಶ್ರೀ ಜಾನಕಿ ರಾಮ ಭೂಮಿ ಪುನೌರಾ ಧಾಮ ಮಂದಿರ ನ್ಯಾಯ ಸಮಿತಿ ರಚಿಸಿದೆ. ಟ್ರಸ್ಟ್ ಅಧ್ಯಕ್ಷರಾಗಿ ಬಿಹಾರ ಸಿಎಂ, ಉಪಾಧ್ಯಕ್ಷರಾಗಿ ಅಭಿವೃದ್ಧಿ ಆಯುಕ್ತರು, ಕಾರ್ಯದರ್ಶಿಯಾಗಿ ಸೀತಾಮರ್ಹಿ ಜಿಲ್ಲಾಧಿಕಾರಿ ಹಾಗೂ ಖಂಜಾಚಿಯಾಗಿ ಉಪ ಅಭಿವೃದ್ಧಿ ಆಯುಕ್ತರು ಇದ್ದಾರೆ. ಇನ್ನುಳಿದ ಐವರು ಸದಸ್ಯರಲ್ಲಿ ದಾಸ್, ತಿರ್ಹಟ್ ವಲಯದ ಆಯುಕ್ತರು, ಪ್ರವಾಸೋದ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆ ಕಾರ್ಯದರ್ಶಿ ಇರುತ್ತಾರೆ.