ನವದೆಹಲಿ: ಭಾರತೀಯ ಚುನಾವಣಾ ಆಯೋಗ ಬುಧವಾರ ನಿರ್ವಾಚನ ಸದನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಎಲ್ಲ ಅನುಮಾನಗಳನ್ನು ಬಗೆಹರಿಸುವ ಕೆಲಸ ಮಾಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಅವರ ಎಲ್ಲ ಅನುಮಾನಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಯಿತು ಎಂದು ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೊಂದಿಗೆ ಈ ಸಭೆ ನಡೆಸಲಾಯಿತು. ಪಕ್ಷದ ಪ್ರತಿನಿಧಿಗಳು ಎತ್ತಿರುವ ಕಳವಳಗಳು, ಸಮಸ್ಯೆಗಳು ಮತ್ತು ಪ್ರಶ್ನೆಗಳನ್ನು ಆಯೋಗವು ಮುಕ್ತ ಮನಸಿನಿಂದ ಆಲಿಸಿತು. ಅಷ್ಟೇ ಅಲ್ಲ ಅವರಿಗೆ ಸಂಪೂರ್ಣ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ಡಿಕೋಡ್ ಮಾಡಿ ತೋರಿಸಿತು. ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತೆ ಮಾಡಲು ಆಯೋಗ ಈಗಿನಿಂದಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ - ಶರದ್‌ಚಂದ್ರ ಪವಾರ್, ಜಾರ್ಖಂಡ್ ಮುಕ್ತಿ ಮೋರ್ಚಾ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್, ಭಾರತೀಯ ಕಮ್ಯುನಿಸ್ಟ್ ಪಕ್ಷ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷಗಳು ಆಯೋಗದ ಕರೆದ ಸಭೆಯಲ್ಲಿ ಪಾಲ್ಗೊಂಡಿದ್ದವು. ಎಲ್ಲಾ ಅರ್ಹ ನಾಗರಿಕರನ್ನು ಸೇರಿಸಿಕೊಳ್ಳಲು ಅನುಕೂಲವಾಗುವಂತೆ SIR ಪ್ರಕ್ರಿಯೆಯನ್ನು ಯೋಜಿತ, ರಚನಾತ್ಮಕ ಮತ್ತು ಹಂತ ಹಂತವಾಗಿ ನಡೆಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ತಿಳಿಸಿದೆ. ಬಿಹಾರ ರಾಜ್ಯಾದ್ಯಂತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ 1,54,977 ಬೂತ್ ಮಟ್ಟದ ಏಜೆಂಟ್‌ಗಳು (BLA) ಸಕ್ರಿಯವಾಗಿ ಭಾಗವಹಿಸುವುದರಿಂದ ಪ್ರಕ್ರಿಯೆಯು ಪಾರದರ್ಶಕ ರೀತಿಯಲ್ಲಿ ನಡೆಯುತ್ತಿದೆ ಎಂದು ಆಯೋಗ ಇದೇ ವೇಳೆ ಖಚಿತಪಡಿಸಿದೆ.