ಪೋರ್ಟ್ ಆಫ್ ಸ್ಪೈನ್: ಜಗತ್ತಿನ ಪ್ರಮುಖ ಮೂರು ಆರ್ಥಿಕತೆಯಲ್ಲಿ ಶೀಘ್ರದಲ್ಲೇ ಭಾರತವೂ ಒಂದಾಗಲಿದೆ. ಕೃತಕ ಬುದ್ದಿಮತ್ತೆ, ಸೆಮಿಕಂಡಕ್ಟರ್ ಮತ್ತು ಕ್ವಾಂಟಮ್ ಕಂಪ್ಯೂಟರ್ ಬೆಳವಣಿಗೆಯ ಹೊಸ ಎಂಜಿನ್ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಇಂದು ಅವಕಾಶಗಳ ಕೇಂದ್ರವಾಗಿದ್ದು, ಬೆಳವಣಿಗೆ ಮತ್ತು ಪ್ರಗತಿಯ ಫಲಗಳು ಅಗತ್ಯ ಇದ್ದವರನ್ನು ತಲುಪುತ್ತವೆ. ಹೊಸ ಭಾರತಕ್ಕೆ ಆಕಾಶವೂ ಮಿತಿಯಲ್ಲ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಕೇಂದ್ರವಾಗಿದೆ. ಈ ಸ್ಟಾರ್ಟ್ಅಪ್ಗಳಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ನಿರ್ದೇಶಕಿಯಾಗಿದ್ದಾರೆ. ಸುಮಾರು 120 ಸ್ಟಾರ್ಟ್ ಅಪ್ಗಳು ಯುನಿಕಾರ್ನ್ ಸ್ಥಾನಮಾನವನ್ನು ಪಡೆದುಕೊಂಡಿವೆ ಎಂದು ಪ್ರಧಾನಿ ಅಂಕಿ - ಅಂಶಗಳ ಸಮೇತ ವಿವರಣೆ ನೀಡಿದ್ದಾರೆ.
ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನ ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕೆರೆಬಿಯನ್ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾ ಪರ್ಸಾದ್ ಬಿಸ್ಸೆಸ್ಸರ್ ಹಾಗೂ ಸಂಪುಟದ ಸದಸ್ಯರು, ಶಾಸಕರು ಮತ್ತು ಇತರ ಹಲವಾರು ಗಣ್ಯರು ಸೇರಿದಂತೆ 4,000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇಲ್ಲಿನ ಭಾರತೀಯ ಸಮುದಾಯದವರನ್ನು ಮೆಚ್ಚಿ ಮಾತನಾಡಿದ ಪ್ರಧಾನಿ ಮೋದಿ, ಇವರು ತಮ್ಮ ತಾಯ್ನಾಡು ತೊರೆದಿರಬಹುದು. ಆದರೆ, ಅವರ ಆತ್ಮ ಭಾರತದಲ್ಲೇ ಇದೆ. ಗಂಗಾ ಯಮುನಾವನ್ನು ಬಿಟ್ಟು ಬಂದಿರಬಹುದು. ಆದರೆ, ಅವರ ಹೃದಯದಲ್ಲಿ ರಾಮಾಯಣ ಇದೆ. ಅವರು ವಲಸಿಗರಲ್ಲ. ಕಾಲಾತೀತ ನಾಗರಿಕತೆಯ ಸಂದೇಶವಾಹಕವಾಗಿದ್ದಾರೆ. ಈ ದೇಶಕ್ಕೆ ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನವಾಗಿದ್ದು, ಈ ಸುಂದರ ರಾಷ್ಟ್ರದ ಮೇಲೆ ನಿಮ್ಮ ಪ್ರಭಾವವಿದೆ ಎಂದರು.
ಇಲ್ಲಿನ ಜನರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಕೃತಿ ಮತ್ತು ಸರಯು ನದಿಯಿಂದ ನೀರನ್ನು ತಂದಿದ್ದೇನೆ. ಹಾಗೆಯೇ ಈ ವರ್ಷ ನಡೆದ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮ ಮಹಾಕುಂಭದ ಪವಿತ್ರ ನೀರನ್ನು ತಂದಿರುವುದಾಗಿ ಪ್ರಧಾನಿ ಇದೇ ವೇಳೆ ಅಲ್ಲಿನ ಅನಿವಾಸಿ ಭಾರತೀಯರಿಗೆ ತಿಳಿಸಿದರು. ಸರಯು ನದಿಯ ಪವಿತ್ರ ನೀರು ಮತ್ತು ಮಹಾ ಕುಂಭಮೇಳವನ್ನು ಇಲ್ಲಿನ ಗಂಗಾಧಾರಾಕ್ಕೆ ಅರ್ಪಿಸುವಂತೆ ನಾನು ಪ್ರಧಾನಿ ಕಮಲಾ ಅವರಿಗೆ ಕೋರುತ್ತೇನೆ. ಈ ಪವಿತ್ರ ನೀರು ಟ್ರಿನಿಡಾಡ್ ಮತ್ತು ಟೊಬಾಗೋ ಜನರಿಗೆ ಆಶೀರ್ವಾದ ಮಾಡಲಿ ಎಂದು ನರೇಂದ್ರ ಮೋದಿ ಅವರು ಆಶಿಸಿದರು.