ಐಜ್ವಾಲ್: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಎರಡರೊಂದಿಗೂ ಬೇಲಿಯಿಲ್ಲದ ಗಡಿಗಳನ್ನು ಹಂಚಿಕೊಂಡಿರುವ ಮಿಜೋರಾಂ ರಾಜ್ಯದ ಲುಂಗ್ಲೈ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಮಿಜೋರಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.
ನಿಖರ ಗುಪ್ತಚರ ಮಾಹಿತಿಯ ಮೇರೆಗೆ, ಮಿಜೋರಾಂ ಮತ್ತು ಕಚಾರ್ ಫ್ರಾಂಟಿಯರ್ಸ್ ಅಡಿಯಲ್ಲಿ 92 ಬೆಟಾಲಿಯನ್ ಗಡಿ ಕಾವಲು ಪಡೆಯ ಸೈನಿಕರು ಮಿಜೋರಾಂ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಜ್ಯದ ಲುಂಗ್ಲೈ ಜಿಲ್ಲೆಯಲ್ಲಿ ವಿವಿಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
7.62 ಎಂಎಂ ಎಕೆ ಸರಣಿ ರೈಫಲ್ನ 6,200 ಸುತ್ತು ಗುಂಡುಗಳು, 1800 ಮೀಟರ್ ಕಾರ್ಡೆಕ್ಸ್, 600 ಡಿಟೋನೇಟರ್ಗಳು, 20 ಮೀಟರ್ ಸುರಕ್ಷತಾ ಫ್ಯೂಸ್ ಮತ್ತು ಇತರ ಉಪಕರಣಗಳನ್ನು ಶನಿವಾರ ರಾತ್ರಿ ಲುಂಗ್ಲೈ ಜಿಲ್ಲೆಯ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಿಜೋರಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ತೆಯಾದ ಈ ಬೃಹತ್ ಪ್ರಮಾಣದ ಮದ್ದುಗುಂಡುಗಳನ್ನು ಮ್ಯಾನ್ಮಾರ್ ಅಥವಾ ಬಾಂಗ್ಲಾದೇಶದಲ್ಲಿನ ಭಯೋತ್ಪಾದಕರಿಗೆ ಕಳ್ಳಸಾಗಣೆಯ ಮೂಲಕ ತಲುಪಿಸಲು ಸಂಗ್ರಹಿಸಿ ಇಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಈಗ್ಗೆ 40 ದಿನಗಳ ಹಿಂದೆಯೂ ಇದೇ ಲುಂಗ್ಲೈ ಜಿಲ್ಲೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ. ಫೆಬ್ರವರಿ 12 ರಂದು ಮಿಜೋರಾಂ ಪೊಲೀಸರು ದಕ್ಷಿಣ ಮಿಜೋರಾಂನ ಲುಂಗ್ಲೈ ಬಜಾರ್ನಲ್ಲಿ ಕಾರೊಂದನ್ನು ತಡೆದು ಎರಡು ಎಕೆ -47 ರೈಫಲ್ಗಳು, ಐದು ಯುಎಸ್ ನಿರ್ಮಿತ ಎಂ 4 ಕಾರ್ಬೈನ್ಗಳು, 20 ಮ್ಯಾಗಜೀನ್ಗಳು, 504 ಸುತ್ತು 7.62 ಎಂಎಂ ಮದ್ದುಗುಂಡುಗಳು ಮತ್ತು 4,675 ಸುತ್ತು 5.56 ಎಂಎಂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.
ಕಾರಿನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಮಿಜೋರಾಂನ ಇಬ್ಬರು ನಿವಾಸಿಗಳು ಮತ್ತು ನೆರೆಯ ತ್ರಿಪುರಾದ ಓರ್ವ ನಿವಾಸಿಯನ್ನು ಬಂಧಿಸಲಾಗಿತ್ತು. ಇವರೆಲ್ಲರೂ ಚಕ್ಮಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಂಧಿತರಿಂದ 49,550 ರೂ ನಗದು, ಕೆಲ ದಾಖಲೆಗಳು, ಸಿಮ್ ಕಾರ್ಡ್ಗಳು, ಎಟಿಎಂ ಕಾರ್ಡ್ಗಳು ಮತ್ತು ಐದು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.