ನವದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸಭೆಯಲ್ಲಿ ಭಾರತವು ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಅಲ್ಲಿನ ಸೇನೆಯು ತನ್ನ ವೈಯಕ್ತಿಕ ಲಾಭಕ್ಕಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ. ಸಭೆಯಲ್ಲಿ ಪಾಕಿಸ್ತಾನವು ಸಿಂಧೂ ಜಲ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸಿದಾಗ ತಕ್ಕ ತಿರುಗೇಟು ನೀಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಇಂತಹ ದ್ವಿಪಕ್ಷೀಯ ವಿವಾದಗಳನ್ನು ಇಲ್ಲಿ ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಖನಿಜ ಸಂಪನ್ಮೂಲಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಸಲುವಾಗಿ ಪಾಕಿಸ್ತಾನ ಸೇನೆಯು ಉದ್ದೇಶಪೂರ್ವಕವಾಗಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುತ್ತಿದೆ ಎಂದು ಹರೀಶ್ ಬೊಟ್ಟು ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ವಿದೇಶಿ ನಾಯಕರಿಗೆ ಖನಿಜ ಶಿಲೆಗಳ ಪೆಟ್ಟಿಗೆಯನ್ನು ಪ್ರದರ್ಶಿಸಿದ್ದ ಘಟನೆಯನ್ನು ಉಲ್ಲೇಖಿಸಿದ ಅವರು, ಗಣಿಗಾರಿಕೆಯಲ್ಲಿ ಸೇನೆಯ ನೇರ ಹಸ್ತಕ್ಷೇಪಕ್ಕೆ ಇದೇ ಸಾಕ್ಷಿ ಎಂದರು. ಚುನಾಯಿತ ಪ್ರಾಂತೀಯ ಸರ್ಕಾರವನ್ನು ವಜಾಗೊಳಿಸಿದ್ದು ಸೇರಿದಂತೆ ಪಾಕಿಸ್ತಾನದಲ್ಲಿ ನಡೆದ ಇತ್ತೀಚಿನ ರಾಜಕೀಯ ಕ್ಷೋಭೆಗಳಿಗೂ ಈ ಸಂಪನ್ಮೂಲ ಲೂಟಿಗೂ ನೇರ ಸಂಬಂಧವಿದೆ ಎಂದು ಅವರು ವಿಶ್ಲೇಷಿಸಿದರು. ಪಾಕಿಸ್ತಾನದ ನಿಜವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಾಗಿ ವರ್ತಿಸುತ್ತಿರುವ ಸೇನೆಯು, ತನ್ನ ನಾಗರಿಕರ ಕಲ್ಯಾಣಕ್ಕಿಂತ ಸ್ವಂತ ಶ್ರೀಮಂತಿಕೆ ಮತ್ತು ಗಡಿಯಾಚೆಗಿನ ದ್ವೇಷಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸೇನೆಯು ನೆರೆಹೊರೆಯವರೊಂದಿಗೆ ಸಂಘರ್ಷ ಪೋಷಿಸುವ ಬದಲು ಜನರ ಒಳಿತಿಗಾಗಿ ಸಂಪನ್ಮೂಲಗಳನ್ನು ಬಳಸಿದರೆ ಪಾಕಿಸ್ತಾನಕ್ಕೆ ಒಳಿತಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಇದೇ ವೇಳೆ ಜಾಗತಿಕ ಸಂಪನ್ಮೂಲ ಆಡಳಿತದ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ ರಾಯಭಾರಿ ಹರೀಶ್, ಅಕ್ರಮ ವ್ಯಾಪಾರವನ್ನು ತಡೆಯಲು 2026ರಲ್ಲಿ ಭಾರತ ಅಧ್ಯಕ್ಷತೆ ವಹಿಸಲಿರುವ 'ಕಿಂಬರ್ಲಿ ಪ್ರಕ್ರಿಯೆ'ಯಂತಹ ಸ್ವಯಂಪ್ರೇರಿತ ಮತ್ತು ಒಮ್ಮತ ಆಧಾರಿತ ಚೌಕಟ್ಟುಗಳು ಪರಿಣಾಮಕಾರಿ ಮಾದರಿಗಳಾಗಿವೆ ಎಂದರು. ಸಂಪನ್ಮೂಲ ಹೊರತೆಗೆಯುವಿಕೆಯಿಂದ ಸ್ಥಳೀಯ ಸಮುದಾಯಗಳಿಗೆ ನೇರ ಪ್ರಯೋಜನವಾಗಬೇಕು ಎಂಬುದಕ್ಕೆ ಭಾರತದ ಗಣಿಗಾರಿಕೆ ಕಾನೂನುಗಳೇ ಉತ್ತಮ ಉದಾಹರಣೆ ಎಂದು ತಿಳಿಸಿದ ಅವರು, ಭದ್ರತಾ ಮಂಡಳಿಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯತ್ತ ಮಾತ್ರ ಗಮನಹರಿಸಿ, ಅಭಿವೃದ್ಧಿ ವಿಷಯಗಳನ್ನು ವಿಶ್ವಸಂಸ್ಥೆಯ ಇತರ ಸಂಸ್ಥೆಗಳಿಗೆ ಬಿಡಬೇಕು ಎಂದು ಸಲಹೆ ನೀಡಿದರು.