ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ವಿರುದ್ಧ ಮುಕ್ತ ನ್ಯಾಯಾಲಯದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ, ವಕೀಲ ಪ್ರವೀಣ್ ಸಿಂಘಾಲ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಬುಧವಾರ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
1971ರ ನ್ಯಾಯಾಲಯ ನಿಂದನೆ ಕಾಯ್ದೆಯಡಿ ಪ್ರವೀಣ್ ಸಿಂಘಾಲ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಅನುಮತಿ ನೀಡಿದ ಬೆನ್ನಲ್ಲೇ, SCBA ಮಂಗಳವಾರ ಈ ಅರ್ಜಿಯನ್ನು ದಾಖಲಿಸಿದೆ. ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ SCBA ಕಾರ್ಯದರ್ಶಿ ಪ್ರಜ್ಞಾ ಬಘೇಲ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, "ನಾನು ಈ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಆದರೆ, ನಾಳೆ ಇದನ್ನು ವಿಚಾರಣಾ ಪಟ್ಟಿಯಲ್ಲಿ ಸೇರಿಸುತ್ತೇನೆ" ಎಂದು ತಿಳಿಸಿದರು.
ಸಿಂಘಾಲ್ ಅವರ ಹೇಳಿಕೆಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಕ್ಷಮಿಸಲಾಗದಂತವು ಎಂದು ಪ್ರಜ್ಞಾ ಬಘೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಿವಸೇನೆ (UBT) ಸಂಸದ ಸಂಜಯ್ ರಾವತ್ ಮತ್ತು ಹಿರಿಯ ಪತ್ರಕರ್ತ ನಿಖಿಲ್ ವಾಘ್ಲೆ ವಿರುದ್ಧ ಸಲ್ಲಿಸಲಾಗಿರುವ ಮತ್ತೊಂದು ನ್ಯಾಯಾಂಗ ನಿಂದನೆ ಅರ್ಜಿಯ ಜೊತೆಗೆ ಈ ಪ್ರಕರಣವನ್ನೂ ವಿಚಾರಣೆಗೆ ಪಟ್ಟಿ ಮಾಡುವಂತೆ ಅವರು ಕೋರಿದ್ದಾರೆ. ಈ ಪ್ರಕರಣವು ಬುಧವಾರ ಮಧ್ಯಾಹ್ನ 2 ಗಂಟೆಗೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.