ವಿಶಾಖಪಟ್ಟಣಂ : ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅಕ್ವಾನ್’ ಚಂಡಮಾರುತ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ನವೆಂಬರ್ 20ರಂದು ಅತ್ಯಂತ ತೀವ್ರ ಚಂಡಮಾರುತವಾಗಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನವೆಂಬರ್ 20ರ ಮಧ್ಯಾಹ್ನದ ಸುಮಾರಿಗೆ ಆಂಧ್ರಪ್ರದೇಶ ಮತ್ತು ಯಾನಂ ಪ್ರದೇಶದ ನೆಲ್ಲೂರು ಹಾಗೂ ಟುನಿ ನಡುವಿನ ಕರಾವಳಿ ಭಾಗದಲ್ಲಿ ಚಂಡಮಾರುತ ಭೂಕುಸಿತ (ಲ್ಯಾಂಡ್‌ಫಾಲ್) ಉಂಟುಮಾಡುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 120ರಿಂದ 130 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ ಗರಿಷ್ಠ 145 ಕಿ.ಮೀ ತಲುಪುವ ಸಾಧ್ಯತೆಯಿದೆ. ನ.17ರ ಬೆಳಿಗ್ಗೆ 5.30ರ ವೇಳೆಗೆ ಬಂಗಾಳಕೊಲ್ಲಿಯ ಮಧ್ಯ ಮತ್ತು ಪಶ್ಚಿಮ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ಈ ಚಂಡಮಾರುತವು ಚೆನ್ನೈನಿಂದ ಪೂರ್ವಕ್ಕೆ 610 ಕಿ.ಮೀ, ತ್ರಿಂಕೋಮಲಿಯಿಂದ ಈಶಾನ್ಯಕ್ಕೆ 630 ಕಿ.ಮೀ, ಮಚಲಿಪಟ್ಟಣದಿಂದ ಆಗ್ನೇಯಕ್ಕೆ 660 ಕಿ.ಮೀ ಹಾಗೂ ವಿಶಾಖಪಟ್ಟಣದಿಂದ ಆಗ್ನೇಯಕ್ಕೆ 670 ಕಿ.ಮೀ ದೂರದಲ್ಲಿತ್ತು. ಇಂದು ಸಂಜೆಯ ವೇಳೆಗೆ ತೀವ್ರ ಚಂಡಮಾರುತವಾಗಿ ಬದಲಾಗಿ, ನವೆಂಬರ್ 19ರ ವೇಳೆಗೆ ಅತ್ಯಂತ ತೀವ್ರ ಚಂಡಮಾರುತದ ಸ್ವರೂಪ ಪಡೆಯಲಿದೆ ಎಂದು ಇಲಾಖೆ ತಿಳಿಸಿದೆ.
ಚಂಡಮಾರುತದ ಪರಿಣಾಮ ನವೆಂಬರ್ 20ರಂದು ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು, ಕಾಕಿನಾಡ, ಪಾರ್ವತಿಪುರಂ ಮಾನ್ಯಂ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದಲ್ಲದೆ ಅನಕಾಪಲ್ಲಿ, ಅನಂತಪುರ, ಅನ್ನಮಯ್ಯ, ಬಾಪಟ್ಲಾ, ಚಿತ್ತೂರು, ಪೂರ್ವ ಗೋದಾವರಿ, ಎಲೂರು, ಗುಂಟೂರು, ಕೃಷ್ಣ, ಕರ್ನೂಲ್, ನಂದ್ಯಾಲ್, ಪಲ್ನಾಡು, ಪ್ರಕಾಶಂ, ನೆಲ್ಲೂರು, ತಿರುಪತಿ, ವಿಶಾಖಪಟ್ಟಣಂ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನೆರೆಯ ಒಡಿಶಾದಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದ್ದು, ನ.20ರಂದು ಕೊರಾಪುಟ್, ಮಲ್ಕಂಗಿರಿ, ಗಜಪತಿ, ಗಂಜಾಂ ಮತ್ತು ರಾಯಗಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಅಂಗುಲ್, ಬಾಲಸೋರ್, ಭದ್ರಕ್, ಕಟಕ್, ಧೆಂಕನಲ್, ಜಗತ್‌ಸಿಂಗ್‌ಪುರ, ಜಾಜ್‌ಪುರ, ಕಂಧಮಲ್, ಕೇಂದ್ರಪಾರ, ಖೋರ್ಧಾ, ಮಯೂರ್ಭಂಜ್, ನಬರಂಗ್‌ಪುರ, ನಯಾಗಢ, ಪುರಿ ಹಾಗೂ ಸಂಬಲ್ಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಸಂಭಾವ್ಯ ಅಪಾಯವನ್ನು ಎದುರಿಸಲು ಒಡಿಶಾ ಆಡಳಿತವು ಸಿದ್ಧತೆಗಳನ್ನು ತೀವ್ರಗೊಳಿಸಿದ್ದು, ಗಂಜಾಂ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದ ಅಪಾಯವಿರುವ ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಕೀರ್ತಿ ವಾಸನ್ ವಿ. ಅವರ ಮಾರ್ಗದರ್ಶನದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 107 ಗರ್ಭಿಣಿಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಅಪಾಯದಂಚಿನಲ್ಲಿರುವ ಇತರ ಜನರ ಸ್ಥಳಾಂತರ ಕಾರ್ಯವೂ ಭರದಿಂದ ಸಾಗಿದೆ. ಆಂಧ್ರ ಮತ್ತು ಒಡಿಶಾ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಕರಾವಳಿ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.