ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ 'ಭಾರತ ಶೃಂಗಸಭೆ'ಯಲ್ಲಿ (Bharat Summit) ಯುರೋಪಿಯನ್ ಸಮಾಜವಾದಿಗಳ ಪಕ್ಷದ ಪ್ರಧಾನ ಕಾರ್ಯದರ್ಶಿ, ಇಟಲಿಯ ನಾಯಕ ಜಿಯಾಕೊಮೊ ಫಿಲಿಬೆಕ್ ಅವರು ಕಾಂಗ್ರೆಸ್ ಪಕ್ಷದ 'ವೋಟ್ ಚೋರ್, ಗಡ್ಡಿ ಛೋಡ್' (Vote Chor, Gaddi Chhod) ಘೋಷಣೆಯನ್ನು ಪುನರುಚ್ಚರಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ 'ಫೋರ್ಜಾ ಇಟಾಲಿಯಾ' ಪಕ್ಷದ ನಾಯಕಿ ಡೆಬೊರಾ ಬರ್ಗಮಿನಿ ಅವರು ಫಿಲಿಬೆಕ್ ಹೇಳಿಕೆಗೆ ತೀವ್ರವಾಗಿ ತಿರುಗೇಟು ನೀಡಿದ್ದಾರೆ.
ಹೈದರಾಬಾದ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲೇ ಮಾತನಾಡಿದ ಜಿಯಾಕೊಮೊ ಫಿಲಿಬೆಕ್, ರಾಹುಲ್ ಗಾಂಧಿ ಅವರ ಚುನಾವಣಾ ಮತದಾರರ ಪಟ್ಟಿ ಸುಧಾರಣಾ ಅಭಿಯಾನವನ್ನು ಬೆಂಬಲಿಸಿದ್ದಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿ ಸಮ್ಮುಖದಲ್ಲೇ 'ವೋಟ್ ಚೋರ್, ಗಡ್ಡಿ ಛೋಡ್' ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಇಟಲಿಯ ಆಡಳಿತಾರೂಢ ಮೈತ್ರಿಕೂಟದ 'ಫೋರ್ಜಾ ಇಟಾಲಿಯಾ' ಪಕ್ಷದ ನಾಯಕಿ ಡೆಬೊರಾ ಬರ್ಗಮಿನಿ, 97 ಕೋಟಿಗೂ ಅಧಿಕ (970 ಮಿಲಿಯನ್) ಮತದಾರರನ್ನು ಹೊಂದಿರುವ ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡಲು ಯಾರಿಗೂ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತವು ತನ್ನದೇ ಆದ ಸ್ವತಂತ್ರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದು, ಇಟಲಿಯೊಂದಿಗೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿರುವ ಮಿತ್ರರಾಷ್ಟ್ರದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಅನುಚಿತ ಎಂದು ಅವರು ಖಂಡಿಸಿದ್ದಾರೆ.
ಇತ್ತ ಭಾರತದಲ್ಲೂ ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ವಿದೇಶಿ ವ್ಯಕ್ತಿಯೊಬ್ಬರು ಭಾರತವನ್ನು ಹೀಯಾಳಿಸುತ್ತಿದ್ದಾಗ ರಾಹುಲ್ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿದ್ದೇಕೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶಿ ರಾಜಕಾರಣಿಗಳಿಂದ ದೇಶದ ಆಂತರಿಕ ರಾಜಕೀಯದ ಬಗ್ಗೆ ಟೀಕೆಗಳನ್ನು ಮಾಡಿಸುವ ಮೂಲಕ ಕಾಂಗ್ರೆಸ್ ದೇಶದ ಘನತೆಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಆದರೆ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಫಿಲಿಬೆಕ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.