ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಲತೀಫ್ ಭಟ್ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ. ಕಳೆದ ವಾರ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ ಮೂವರು ಯೋಧರನ್ನು ಗಾಯಗೊಳಿಸಿದ್ದ ಉಗ್ರರಿಗೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ.
ನವೆಂಬರ್ 11ರಂದು ಕುಲ್ಗಾಮ್ನ ಮೀರ್ ಬಜಾರ್ ಸಮೀಪದ ಸಿಆರ್ಪಿಎಫ್ ಶಿಬಿರದ ಮೇಲೆ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿತ್ತು. ದಾಳಿಯ ಬಳಿಕ ಸಮೀಪದ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದ ಉಗ್ರರ ಪತ್ತೆಗೆ ಭದ್ರತಾ ಪಡೆಗಳು ತೀವ್ರ ಶೋಧ ಆರಂಭಿಸಿದ್ದವು.
ಸೋಮವಾರ ಕುಲ್ಗಾಮ್ನ ಪ್ರದೇಶವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆಗಳನ್ನು ಕಂಡ ಉಗ್ರರು ಗುಂಡಿನ ದಾಳಿ ನಡೆಸಿದಾಗ, ಪ್ರತಿಯಾಗಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಹತರಾದವರಲ್ಲಿ ಒಬ್ಬನಾದ ಲತೀಫ್ ಭಟ್ ಕುಲ್ಗಾಮ್ ಜಿಲ್ಲೆಯ ನಿವಾಸಿಯಾಗಿದ್ದು, ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ. ಜುಲೈ 22ರಂದು ಅನಂತ್ನಾಗ್ನಲ್ಲಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಶಿಕ್ ಹುಸೇನ್ ಹತ್ಯೆ ಹಾಗೂ ಜುಲೈ 31ರಂದು ಕುಲ್ಗಾಮ್ನಲ್ಲಿ ಛತ್ತೀಸ್ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣಗಳಲ್ಲಿ ಈತನ ಕೈವಾಡವಿತ್ತು ಎಂದು ಶಂಕಿಸಲಾಗಿದೆ. ಪಾಕಿಸ್ತಾನಿ ಉಗ್ರರ ಸಂಪರ್ಕದಲ್ಲಿದ್ದ ಈತನ ಪತ್ತೆಗೆ ಭದ್ರತಾ ಪಡೆಗಳು 15 ಲಕ್ಷ ರೂ. ಬಹುಮಾನ ಘೋಷಿಸಿದ್ದವು.