image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬೈನಲ್ಲಿ ರಾಜ ದಂಪತಿಗಳ ಕ್ರಿಕೆಟ್ ಸಂಭ್ರಮ: ಸಚಿನ್ ಜೊತೆ ಗಲ್ಲಿ ಕ್ರಿಕೆಟ್ ಆಡಿದ ಪ್ರಿನ್ಸ್ ವಿಲಿಯಂ ಮತ್ತು ಕೇಟ್

ಮುಂಬೈನಲ್ಲಿ ರಾಜ ದಂಪತಿಗಳ ಕ್ರಿಕೆಟ್ ಸಂಭ್ರಮ: ಸಚಿನ್ ಜೊತೆ ಗಲ್ಲಿ ಕ್ರಿಕೆಟ್ ಆಡಿದ ಪ್ರಿನ್ಸ್ ವಿಲಿಯಂ ಮತ್ತು ಕೇಟ್

ಮುಂಬೈ: ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಮತ್ತು ರಾಜಕುಮಾರಿ ಕ್ಯಾಥರೀನ್ (ಕೇಟ್) ಅವರು ತಮ್ಮ ಪ್ರವಾಸದ ಮೊದಲ ದಿನವಾದ ಇಂದು ವಾಣಿಜ್ಯ ನಗರಿ ಮುಂಬೈನಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸೇರಿ ರಾಜ ದಂಪತಿಗಳು ಶಾಲಾ ಮಕ್ಕಳೊಂದಿಗೆ 'ಗಲ್ಲಿ ಕ್ರಿಕೆಟ್' ಪಂದ್ಯದಲ್ಲಿ ಭಾಗವಹಿಸಿದರು. ಈ ವೇಳೆ ಪ್ರಿನ್ಸ್ ವಿಲಿಯಂ ಅವರು ಬೌಲಿಂಗ್ ಮಾಡಿದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟ್ ಬೀಸಿ ರಂಜಿಸಿದರು. ಪಂದ್ಯದ ನಂತರ ರಾಜ ದಂಪತಿಗಳು ಮಕ್ಕಳೊಂದಿಗೆ ರಸ್ತೆಬದಿಯ ಅಂಗಡಿಯಲ್ಲಿ ಚಹಾ ಸೇವಿಸಿ, ಅತಿಥಿಗಳೊಂದಿಗೆ 'ಚಾಯ್ ಪರ್ ಚರ್ಚಾ' ನಡೆಸಿದರು. ಕಳೆದ ಅಕ್ಟೋಬರ್‌ನಲ್ಲಿಯೇ ಪ್ರಿನ್ಸ್ ವಿಲಿಯಂ ಅವರು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯ ಹೊರಗೆ ಜೋ ರೂಟ್ ಮತ್ತು ಅಜಿಂಕ್ಯ ರಹಾನೆ ಅವರೊಂದಿಗೆ ಕ್ರಿಕೆಟ್ ಆಡುವ ಮೂಲಕ ತಮ್ಮ ಈ ಭಾರತ ಪ್ರವಾಸದ ಮುನ್ಸೂಚನೆ ನೀಡಿದ್ದರು.

ನವೆಂಬರ್ 17 ರಂದು ನಡೆಯಲಿರುವ ಆರನೇ ವಾರ್ಷಿಕ 'ಅರ್ಥ್‌ಶಾಟ್ ಪ್ರಶಸ್ತಿ' (Earthshot Prize) ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಬಳಿಕ ರಾಜ ದಂಪತಿಗಳು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಲಿದ್ದು, ನಂತರ ನವದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ವಿಲಿಯಂ ಮತ್ತು ಕೇಟ್ ಮುಂಬೈನಲ್ಲಿ ಕ್ರಿಕೆಟ್ ಆಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2016ರ ಏಪ್ರಿಲ್ 10 ರಂದು ಭಾರತಕ್ಕೆ ಭೇಟಿ ನೀಡಿದ್ದಾಗಲೂ, ಮುಂಬೈನ ಪ್ರಸಿದ್ಧ ಓವಲ್ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ದಿಲೀಪ್ ವೆಂಗ್‌ಸರ್ಕರ್ ಅವರೊಂದಿಗೆ ಸೇರಿ ಸ್ಥಳೀಯ ಎನ್‌ಜಿಒ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದರು.

Category
ಕರಾವಳಿ ತರಂಗಿಣಿ