image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

AIMIM ಮತ್ತು ಆಜಾದ್ ಸಮಾಜ ಪಕ್ಷ ಮೈತ್ರಿ; ಚಂದ್ರಶೇಖರ್ ಆಜಾದ್ ಯುಪಿ ಸಿಎಂ ಅಭ್ಯರ್ಥಿ

AIMIM ಮತ್ತು ಆಜಾದ್ ಸಮಾಜ ಪಕ್ಷ ಮೈತ್ರಿ; ಚಂದ್ರಶೇಖರ್ ಆಜಾದ್ ಯುಪಿ ಸಿಎಂ ಅಭ್ಯರ್ಥಿ

ನವದೆಹಲಿ : 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮತ್ತು ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷ (ASP) ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿವೆ. ಗುರುವಾರ ಲಕ್ನೋದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರು 'ಸಾಮಾಜಿಕ ಪರಿವರ್ತನ ಮೋರ್ಚಾ' (Samajik Parivartan Morcha) ಎಂಬ ಹೊಸ ಮೈತ್ರಿಕೂಟವನ್ನು ಘೋಷಿಸಿದ್ದು, ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ ಚಂದ್ರಶೇಖರ್ ಆಜಾದ್ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಓವೈಸಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಹಾಗೂ ಹಿಂದುಳಿದ, ದಲಿತ ಮತ್ತು ಮುಸ್ಲಿಂ ಸಮುದಾಯಗಳ ರಾಜಕೀಯ ಹಕ್ಕುಗಳಿಗಾಗಿ ಹೋರಾಡುವುದು ಈ ಮೈತ್ರಿಯ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶ ಮತ್ತು ರೋಹಿಲ್‌ಖಂಡ್‌ನ ಮುಸ್ಲಿಂ ಹಾಗೂ ದಲಿತ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳ ಮೇಲೆ ಈ ಮೈತ್ರಿಕೂಟ ಹೆಚ್ಚಿನ ಗಮನಹರಿಸಲಿದೆ. ಶಿಕ್ಷಣ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ಉಭಯ ನಾಯಕರು ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಕೆಲವು ಸಣ್ಣ ಪಕ್ಷಗಳು ಮೈತ್ರಿಕೂಟಕ್ಕೆ ಸೇರುವ ಸಾಧ್ಯತೆಯೂ ಇದೆ.

ಈ ಬೆಳವಣಿಗೆಯು ಸಮಾಜವಾದಿ ಪಕ್ಷದ (SP) ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತ್ತು ದಲಿತ ಮತಬ್ಯಾಂಕ್‌ಗೆ ಹೊಡೆತ ನೀಡಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಮತಗಳ ವಿಭಜನೆಯಾದರೆ ಅದರ ಪರೋಕ್ಷ ಲಾಭ ಬಿಜೆಪಿಗೆ ದೊರೆಯಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ರಾಜ್ಯದ ಜನರು ಈಗಾಗಲೇ ಸಮಾಜವಾದಿ ಪಕ್ಷದ ಪರವಾಗಿ ಮನಸ್ಸು ಮಾಡಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಪಕ್ಷಗಳಿಗೂ ಸ್ವಾತಂತ್ರ್ಯವಿದೆ ಎಂದಿರುವ ಬಿಜೆಪಿ ನಾಯಕರು, ಓವೈಸಿ ಅವರ ರಾಜಕೀಯ ನಿಲುವುಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ AIMIM 95 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸುಮಾರು ಶೇ. 0.49ರಷ್ಟು ಮತ ಗಳಿಸಿದ್ದರೂ ಯಾವುದೇ ಸ್ಥಾನ ಗೆದ್ದಿರಲಿಲ್ಲ. ASP ಕೂಡ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಆದರೆ, 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ್ ಪ್ರದೇಶದ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದ AIMIM, ಈ ಬಾರಿ ಉತ್ತರ ಪ್ರದೇಶದಲ್ಲಿ ಸುಮಾರು ಶೇ. 19ರಷ್ಟಿರುವ ಮುಸ್ಲಿಂ ಮತ್ತು ಶೇ. 21ರಷ್ಟಿರುವ ದಲಿತ ಮತಗಳನ್ನು ಒಗ್ಗೂಡಿಸುವ ತಂತ್ರ ಹೆಣೆದಿದೆ. ಮುಂದಿನ ದಿನಗಳಲ್ಲಿ ಈ ಹೊಸ ಮೈತ್ರಿಕೂಟವು ಬಿಜೆಪಿ ಮತ್ತು ಎಸ್‌ಪಿ ನಡುವಿನ ನೇರ ಹಣಾಹಣಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

Category
ಕರಾವಳಿ ತರಂಗಿಣಿ