image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ವೇತನ ಕಡಿತಕ್ಕೆ ತೆಲಂಗಾಣ ಸರ್ಕಾರದ ಹೊಸ ಕಾಯ್ದೆ

ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ವೇತನ ಕಡಿತಕ್ಕೆ ತೆಲಂಗಾಣ ಸರ್ಕಾರದ ಹೊಸ ಕಾಯ್ದೆ

ಹೈದರಾಬಾದ್: ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ವೇತನದಿಂದ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ, ನೇರವಾಗಿ ಪೋಷಕರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮಹತ್ವದ ಕಾನೂನನ್ನು ಜಾರಿಗೊಳಿಸಲು ತೆಲಂಗಾಣ ಸರ್ಕಾರ ಸಜ್ಜಾಗಿದೆ. ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾಗುವ ಹಿರಿಯ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ‘ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣಾ ಕಾಯಿದೆ-2026’ ಅನ್ನು ರೂಪಿಸಲಾಗಿದ್ದು, ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು ಇದರ ಅನುಷ್ಠಾನದ ನಿಯಮಗಳನ್ನು ಸಿದ್ಧಪಡಿಸಿ ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದೆ.

ಈ ನೂತನ ನಿಯಮದ ಪ್ರಕಾರ, ಪೋಷಕರ ಯೋಗಕ್ಷೇಮ ನೋಡಿಕೊಳ್ಳದ ಸರ್ಕಾರಿ ನೌಕರನ ಒಟ್ಟು ಮಾಸಿಕ ವೇತನದ ಶೇಕಡಾ 15ರಷ್ಟು ಅಥವಾ ಗರಿಷ್ಠ ₹10,000, ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಕಡಿತಗೊಳಿಸಿ ಪೋಷಕರಿಗೆ ಪಾವತಿಸಲಾಗುತ್ತದೆ. ಕಾನೂನು ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ಹೈದರಾಬಾದ್‌ನಿಂದ ಮೂರು ಹಾಗೂ ಕರೀಂನಗರ ಮತ್ತು ನಿಜಾಮಾಬಾದ್‌ನಿಂದ ತಲಾ ಒಂದರಂತೆ ಒಟ್ಟು ಐದು ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ.

ಸರ್ಕಾರಿ ನೌಕರರಾಗಿರುವ ಗಂಡು, ಹೆಣ್ಣು ಅಥವಾ ದತ್ತು ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪೋಷಕರು, ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳಿಲ್ಲ ಎಂದು ಘೋಷಿಸಿ ಜಿಲ್ಲಾಧಿಕಾರಿಗಳ ನೇತೃತ್ವದ ವಿಶೇಷ ಪ್ರಾಧಿಕಾರಕ್ಕೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ತಮ್ಮ ಒಟ್ಟು ಮಾಸಿಕ ಆದಾಯದ ವಿವರ ಮತ್ತು ಮಕ್ಕಳು ಈವರೆಗೆ ನೀಡಿದ ಆರ್ಥಿಕ ನೆರವಿನ ದಾಖಲೆಗಳನ್ನು ಒದಗಿಸಬೇಕು. ಅರ್ಜಿ ಪರಿಶೀಲಿಸಿದ ಹತ್ತು ದಿನಗಳ ಒಳಗಾಗಿ ಸಂಬಂಧಪಟ್ಟ ನೌಕರನಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯಲಾಗುತ್ತದೆ. ನೌಕರರು ನಿಗದಿತ ಸಮಯದಲ್ಲಿ ಪ್ರತಿಕ್ರಿಯಿಸದಿದ್ದರೆ ಅಥವಾ ವಿಚಾರಣೆಗೆ ಗೈರಾದರೆ, ವೇತನ ಕಡಿತಗೊಳಿಸಿ ಪೋಷಕರ ಖಾತೆಗೆ ಜಮೆ ಮಾಡುವಂತೆ ಔಪಚಾರಿಕ ಆದೇಶ ಹೊರಡಿಸಲಾಗುತ್ತದೆ.

ವಿಚಾರಣೆಗೆ ಪೋಷಕರ ಹಾಜರಾತಿಯೂ ಕಡ್ಡಾಯವಾಗಿದ್ದು, ಸತತ ಎರಡು ಬಾರಿ ಗೈರಾದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ; ಆದರೆ ಸೂಕ್ತ ಕಾರಣ ನೀಡಿದಲ್ಲಿ ವಿಚಾರಣೆಯನ್ನು ಪುನರಾರಂಭಿಸಲು ಅವಕಾಶವಿದೆ. ವಿಚಾರಣೆಯ ಬಳಿಕ ಪ್ರಾಧಿಕಾರ ಹೊರಡಿಸುವ ಆದೇಶವನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು 60 ದಿನಗಳ ಒಳಗಾಗಿ ಜಾರಿಗೊಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪೋಷಕರ ಒಂದಕ್ಕಿಂತ ಹೆಚ್ಚು ಮಕ್ಕಳು ಸರ್ಕಾರಿ ನೌಕರರಾಗಿದ್ದರೆ, ಪ್ರಾಧಿಕಾರದ ಆದೇಶದ ಮೊತ್ತವನ್ನು ಅವರೆಲ್ಲರೂ ಸಮಾನವಾಗಿ ಹಂಚಿಕೊಂಡು ಪಾವತಿಸಬೇಕಾಗುತ್ತದೆ.

ಈ ವಿಶೇಷ ಪ್ರಾಧಿಕಾರ ಮತ್ತು ಆಯೋಗಗಳಿಗೆ ಸಿವಿಲ್ ನ್ಯಾಯಾಲಯದ ಅಧಿಕಾರ ನೀಡಲಾಗಿದ್ದು, ಆದೇಶ ಪಾಲಿಸದ ಆಡಳಿತ ಮಂಡಳಿಗಳಿಗೆ ದಂಡ ವಿಧಿಸುವ ಅವಕಾಶವಿದೆ. ಜಿಲ್ಲಾ ಪ್ರಾಧಿಕಾರದ ಆದೇಶಗಳ ವಿರುದ್ಧ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು ಹಾಗೂ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಪೋಷಕರು ತಮ್ಮ ಅರ್ಜಿಯನ್ನು ಹಿಂಪಡೆಯಬಹುದು. ಪೋಷಕರಲ್ಲಿ ಒಬ್ಬರು ಮೃತಪಟ್ಟರೆ, ಬದುಕುಳಿದವರು ಅಗತ್ಯ ದಾಖಲೆ ನೀಡಿ ಮಾಸಿಕ ಪಾವತಿಯನ್ನು ಮುಂದುವರಿಸಬಹುದಾಗಿದೆ. ಹಿರಿಯ ನಾಗರಿಕರ ಆಯೋಗದ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯು ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಪ್ರಕರಣಗಳ ಪ್ರಗತಿಯನ್ನು ಪರಿಶೀಲಿಸಲಿದೆ.

Category
ಕರಾವಳಿ ತರಂಗಿಣಿ