ನವದೆಹಲಿ : ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ತಮ್ಮ ಲೈವ್ ಕಾನ್ಸರ್ಟ್ನಲ್ಲಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ತಮ್ಮ ಟೀಕಾಕಾರರಿಗೆ ಮತ್ತು ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನಾಯಕ ಅಭಿಜೀತ್ ದಿಪ್ಕೆಗೆ ವೇದಿಕೆಯ ಮೇಲಿಂದಲೇ ನೇರ ಮತ್ತು ಖಡಕ್ ತಿರುಗೇಟು ನೀಡಿದ್ದಾರೆ. ಕಾನ್ಸರ್ಟ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ದಿಲ್ಜಿತ್, ತಮ್ಮ ಹಳೆಯ "ಐ ಆಮ್ ಆನ್ ಆರ್ಟಿಸ್ಟ್, ಬ್ರೋ" ಹೇಳಿಕೆಯನ್ನು ಟೀಕಿಸಿದವರಿಗೆ ಪ್ರತ್ಯುತ್ತರ ನೀಡಿದರು. "ನಾನೊಬ್ಬ ಕಲಾಕಾರ, ಹಾಗಾಗಿ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಶಾಂತನಾಗಿದ್ದೇನೆ, ನನ್ನನ್ನು ಶಾಂತವಾಗಿಯೇ ಇರಲು ಬಿಡಿ. ನಾನು ಎಲ್ಲರನ್ನೂ ಬೆಂಬಲಿಸುತ್ತೇನೆ, ಆದರೆ ಪಂಜಾಬಿಗಳಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಯುದ್ಧಗಳಲ್ಲಿ ಹೇಗೆ ಹೋರಾಡಬೇಕು ಎಂದು ಯಾರೂ ಪಾಠ ಕಲಿಸಬೇಕಾಗಿಲ್ಲ" ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಇದರೊಂದಿಗೆ, ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ತಮ್ಮ 'ಸಟ್ಲುಜ್' ಚಿತ್ರವನ್ನು ವೇದಿಕೆಯ ಮೇಲೆ ಲೇವಡಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, "ನೀವು ವೇದಿಕೆಯ ಮೇಲೆ ನಿಂತು ಯಾವ ಚಿತ್ರವನ್ನು ತಮಾಷೆ ಮಾಡುತ್ತಿದ್ದೀರೋ, ಆ ಚಿತ್ರವನ್ನು ಹೊರತರಲು ನಾವು ದೀರ್ಘಕಾಲದವರೆಗೆ ಹೋರಾಟ ಮಾಡಿದ್ದೇವೆ" ಎಂದು ಬೇಸರ ಮತ್ತು ಸಿಟ್ಟು ಎರಡನ್ನೂ ಹೊರಹಾಕಿದರು. ಕೆಲವರು ತಮ್ಮ ಸುತ್ತ ನಕಾರಾತ್ಮಕತೆಯನ್ನು ಹರಡಲು ಯತ್ನಿಸುತ್ತಿದ್ದಾರೆ, ಆದರೆ ತಾವು ಈ ಎಲ್ಲದಕ್ಕಿಂತ ಮಿಗಿಲಾಗಿದ್ದು ಇವುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೇರವಾಗಿ ತಿರುಗೇಟು ನೀಡಿದರು.
ದಿಲ್ಜಿತ್ ಅವರ ಈ ಖಾರವಾದ ಹೇಳಿಕೆ ಬಹಿರಂಗವಾಗುತ್ತಿದ್ದಂತೆ, ಟ್ವಿಟರ್ (X) ನಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಕ್ಷಮಾಪಣಾ ಪತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ರಹಸ್ಯವೊಂದನ್ನು ಬಿಚ್ಚಿಟ್ಟ ಅಭಿಜೀತ್, ತಾವು ಸ್ವತಃ ದಿಲ್ಜಿತ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ಚಿಕಾಗೋದಲ್ಲಿ ನಡೆದ ಲೈವ್ ಕಾನ್ಸರ್ಟ್ನಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮ ಆನಂದಿಸಿದ್ದನ್ನು ನೆನಪಿಸಿಕೊಂಡ ಅವರು, ಜೂನ್ನಲ್ಲಿ ಬಂದ ಹೇಳಿಕೆಯಿಂದ ತಮಗೆ ಸ್ವಲ್ಪ ಬೇಸರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಪಂಜಾಬಿ ಶೈಲಿಯಲ್ಲೇ "ಪಾಜಿ, ನನ್ನನ್ನು ನಿಮ್ಮ ಕಿರಿಯ ಸಹೋದರ ಎಂದು ಭಾವಿಸಿ ಈ ತಪ್ಪು ತಿಳುವಳಿಕೆಗೆ ಮಣ್ಣು ಹಾಕಿ (ಮರೆತುಬಿಡಿ)" ಎಂದು ಸಾಷ್ಟಾಂಗ ನಮಸ್ಕಾರದ ಭಂಗಿಯಲ್ಲಿ ಕ್ಷಮೆಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ.