image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಜೆಪಿ ನಾಯಕರ ಜೈಲು ಶಿಕ್ಷೆ ಹಾಗೂ ಪೌರತ್ವ ಗೊಂದಲ: ಸೌರವ್ ದಾಸ್ ಅರ್ಜಿಯ ಲೋಪದ ಬಗ್ಗೆ ತೀವ್ರ ಚರ್ಚೆ

ಸಿಜೆಪಿ ನಾಯಕರ ಜೈಲು ಶಿಕ್ಷೆ ಹಾಗೂ ಪೌರತ್ವ ಗೊಂದಲ: ಸೌರವ್ ದಾಸ್ ಅರ್ಜಿಯ ಲೋಪದ ಬಗ್ಗೆ ತೀವ್ರ ಚರ್ಚೆ

ನವದೆಹಲಿ : ಕಾಕ್ರೋಚ್​ ಜನತಾ ಪಕ್ಷ (CJP)ಯ ಸಂಸ್ಥಾಪಕ ಅಭಿಜೀತ್​ ದೀಪ್ಕೆ, "ಪ್ರತಿಭಟನೆಯ ಮುಖ್ಯ ಸೂತ್ರಧಾರ ನಾನಲ್ಲ, ಸೌರವ್​ ದಾಸ್​ ಮತ್ತು ಅಶುತೋಷ್​ ರಾಂಕಾ ಅವರೇ ಇದರ ಮುಂದಾಳತ್ವ ವಹಿಸಿದ್ದರು" ಎಂದು ವಿಡಿಯೋ ಮೂಲಕ ನೀಡಿದ ಸ್ಪಷ್ಟನೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ದೆಹಲಿಯಲ್ಲಿ ನಡೆದ ಘಟನೆಯ ತನಿಖೆಯನ್ನು ಕ್ರೈಂ ಬ್ರಾಂಚ್ ಕೈಗೆತ್ತಿಕೊಳ್ಳುತ್ತಿದ್ದಂತೆ ದೀಪ್ಕೆ, "ನಾನು ಅವರು ಹೇಳಿದಂತೆ ಕೇಳುತ್ತಿದ್ದೆ ಅಷ್ಟೇ" ಎಂದಿದ್ದರು. ಈ ನಡುವೆ ಅಭಿಜೀತ್ ದೀಪ್ಕೆ ಹೊರಗಿದ್ದರೆ, ಸೌರವ್​ ದಾಸ್​ ಮತ್ತು ಅಶುತೋಷ್​ ರಾಂಕಾ ಅವರು ಏಳು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ಇದೀಗ ಸೌರವ್​ ದಾಸ್​ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಲು ಕಾರಣವಾದ ಆದೇಶದ ಪ್ರತಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅರ್ಜಿಯಲ್ಲಿ ಕೆಲವೊಂದು ತಾಂತ್ರಿಕ ಲೋಪಗಳಿರುವುದು ಒಂದೆಡೆಯಾದರೆ, ಎಸ್‌ಇಎಂ ನ್ಯಾಯಾಲಯದ ದಾಖಲೆಗಳಲ್ಲಿ ತಂದೆಯ ಹೆಸರು ಮತ್ತು ಸೂಕ್ತ ವಿಳಾಸವನ್ನು ಸರಿಯಾಗಿ ನೀಡಲು ಅವರು ವಿಫಲರಾಗಿದ್ದಾರೆ ಎನ್ನಲಾಗಿದೆ. ಕೊನೆಗೆ ಅವರು ದೆಹಲಿಯ ವಿಳಾಸ ನೀಡಿ, ತಂದೆಯ ಹೆಸರು ಸುಬೀರ್​ ದಾಸ್​ ಎಂದು ನಮೂದಿಸಿದ್ದರು.

ಆದರೆ 2023 ರ ಮದ್ರಾಸ್ ಹೈಕೋರ್ಟ್ ಆದೇಶದ ಪ್ರತಿಯೊಂದರಲ್ಲಿ ಸೌರವ್​ ಅವರು ಸೀಮಾ ಛೆಟ್ರಿ ಅವರ ಪುತ್ರ ಎಂದು ಉಲ್ಲೇಖಿಸಲಾಗಿದ್ದು, ಅಲ್ಲಿ ಪಾಂಡಿಚೇರಿ ವಿಳಾಸ ನೀಡಲಾಗಿದೆ. ವರದಿಗಳ ಪ್ರಕಾರ, ಸೌರವ್ ಅವರ ಜೈವಿಕ ತಂದೆ ನೇಪಾಳಿ ಮೂಲದವರಾಗಿದ್ದು, ಅವರಿಗೆ 3 ವರ್ಷವಿದ್ದಾಗ ಕುಟುಂಬವನ್ನು ತೊರೆದಿದ್ದರು. ತದನಂತರ ತಾಯಿ ಸೀಮಾ, ಸುಬೀರ್ ದಾಸ್ ಅವರೊಂದಿಗೆ ನೆಲೆಸಿದ್ದರು. ಸುಬೀರ್ ಅವರು ಸೌರವ್ ಅವರನ್ನು ಕಾನೂನುಬದ್ಧವಾಗಿ ದತ್ತು ಪಡೆದಿಲ್ಲವಾದರೂ, ಸೌರವ್ 'ದಾಸ್' ಎಂಬ ಸರ್‌ನೇಮ್ ಬಳಸುತ್ತಿದ್ದಾರೆ.

ಇನ್ನೊಂದೆಡೆ, 2019 ರ CAA/NRC ಜಾರಿಗೆ ಬರುವವರೆಗೂ ಸೀಮಾ ಛೆಟ್ರಿ ತಮ್ಮನ್ನು ನೇಪಾಳಿ ಎಂದು ಗುರುತಿಸಿಕೊಳ್ಳುತ್ತಿದ್ದರು, ಆದರೆ ನಂತರ ಅವರ ಮೂಲ ಸ್ಥಳ ಪಶ್ಚಿಮ ಬಂಗಾಳದ ಸಿಲಿಗುರಿ ಎಂದು ಬದಲಾಗಿದೆ ಎನ್ನಲಾಗಿದೆ. ಭಾರತೀಯ ಪೌರತ್ವ ಕಾಯ್ದೆಯ ಪ್ರಕಾರ, 1987 ಮತ್ತು 2004 ರ ನಡುವೆ ಭಾರತದಲ್ಲಿ ಜನಿಸಿದ ವ್ಯಕ್ತಿಗೆ ಪೋಷಕರಲ್ಲಿ ಕನಿಷ್ಠ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಸ್ವಯಂಚಾಲಿತ ಪೌರತ್ವ ಸಿಗುತ್ತದೆ. 2000 ರಲ್ಲಿ ಜನಿಸಿದ ಸೌರವ್ ಅವರ ಜೈವಿಕ ಪೋಷಕರಿಬ್ಬರೂ ನೇಪಾಳಿ ಮೂಲದವರಾಗಿದ್ದರೆ, ಅವರ ಪೌರತ್ವಕ್ಕೆ ಕಾನೂನು ತೊಡಕು ಉಂಟಾಗಬಹುದು. RTI ಕಾರ್ಯಕರ್ತನಾಗಿ ಗುರುತಿಸಿಕೊಂಡು ರಾಜಕೀಯ ಸವಾಲು ಎದುರಿಸುತ್ತಿರುವ ಸೌರವ್ ದಾಸ್ ಅವರಿಗೆ ಈ ಸಂಗತಿಗಳು ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಆದರೆ ಈ ಯಾವುದೇ ಮಾಹಿತಿಗಳ ಕುರಿತು ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.

Category
ಕರಾವಳಿ ತರಂಗಿಣಿ