ಚೆನ್ನೈ : ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ವಿಮಾನ ಇಂಧನ (ATF) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಗಣನೀಯವಾಗಿ ಕಡಿತಗೊಳಿಸುವ ಮೂಲಕ ವಿಮಾನಯಾನ ಕ್ಷೇತ್ರಕ್ಕೆ ಬೆಂಬಲ ಸೂಚಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಅಪರೂಪದ ಸನ್ನಿವೇಶವಾಗಿ, ರಾಜ್ಯ ಸರ್ಕಾರದ ಈ ಪ್ರಗತಿಪರ ನಿರ್ಧಾರವನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಶ್ಲಾಘಿಸಿದೆ.
ರಾಜ್ಯ ಸರ್ಕಾರದ ನೂತನ ಆದೇಶದಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶೇ. 29ರಷ್ಟಿದ್ದ ಜೆಟ್ ಇಂಧನ ಮೇಲಿನ ವ್ಯಾಟ್ ಪ್ರಮಾಣವನ್ನು ಶೇ. 16ಕ್ಕೆ ಇಳಿಸಲಾಗಿದೆ. ಇನ್ನು ರಾಜ್ಯದ ಇತರೆಲ್ಲಾ ವಿಮಾನ ನಿಲ್ದಾಣಗಳಲ್ಲಿ ಇದನ್ನು ಕೇವಲ ಶೇ. 1ಕ್ಕೆ ತರಲಾಗಿದೆ. ಇದರೊಂದಿಗೆ ಸಣ್ಣ ವಿಮಾನಗಳ ಇಂಧನ ತೆರಿಗೆಯನ್ನು ಶೇ. 5ರಿಂದ ಶೇ. 1ಕ್ಕೆ ಇಳಿಸಲಾಗಿದ್ದು, ಈ ವಿನಾಯಿತಿಯು ಅಕ್ಟೋಬರ್ 31, 2027ರವರೆಗೆ ಚಾಲ್ತಿಯಲ್ಲಿರಲಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಈ ನಿರ್ಧಾರವನ್ನು ಸ್ವಾಗತಿಸಿ, ವಿಮಾನ ಇಂಧನ ಮೇಲಿನ ವ್ಯಾಟ್ ತಗ್ಗಿಸುವ ಮೂಲಕ ತಮಿಳುನಾಡು ಸರ್ಕಾರವು ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ರಿಲೀಫ್ ನೀಡಿದೆ ಎಂದಿದ್ದಾರೆ. ಪ್ರಯಾಣಿಕರಿಗೆ ವಿಮಾನ ಪ್ರಯಾಣವನ್ನು ಸುಲಭ ಹಾಗೂ ಕೈಗೆಟುಕುವಂತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅವರು ಮುಖ್ಯಮಂತ್ರಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ವಿಮಾನಯಾನ ಸಂಸ್ಥೆಗಳಿಗೆ ಈ ನಿರ್ಧಾರವು ದೊಡ್ಡ ಪ್ರಮಾಣದ ಆರ್ಥಿಕ ಶಕ್ತಿ ನೀಡಲಿದೆ. ಅಷ್ಟೇ ಅಲ್ಲದೆ, ರಾಜ್ಯದ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಹೊಸ ವೈಮಾನಿಕ ಮಾರ್ಗಗಳ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವರು ಅಭಿಪ್ರಾಯಪಟ್ಟಿದ್ದಾರೆ.