image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಗ್ರಾ ಶಿಕ್ಷಕರ ಎಂಎಲ್ಸಿ ಚುನಾವಣೆ ವೇಳೆ ಹೈಡ್ರಾಮಾ: ಸನಾತನ ಧರ್ಮ ತೊರೆದು ಇಸ್ಲಾಂ ಸ್ವೀಕರಿಸುವುದಾಗಿ ಭಾವುಕರಾದ ಅಭ್ಯರ್ಥಿ

ಆಗ್ರಾ ಶಿಕ್ಷಕರ ಎಂಎಲ್ಸಿ ಚುನಾವಣೆ ವೇಳೆ ಹೈಡ್ರಾಮಾ: ಸನಾತನ ಧರ್ಮ ತೊರೆದು ಇಸ್ಲಾಂ ಸ್ವೀಕರಿಸುವುದಾಗಿ ಭಾವುಕರಾದ ಅಭ್ಯರ್ಥಿ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಆಗ್ರಾ ಶಿಕ್ಷಕರ ಎಂಎಲ್ಸಿ ಚುನಾವಣೆಯ ಮತದಾನದ ವೇಳೆ ತೀವ್ರ ಹೈಡ್ರಾಮಾ ನಡೆದಿದ್ದು, ಸಮಾಜವಾದಿ ಪಕ್ಷದ (SP) ಅಭ್ಯರ್ಥಿ ಡಾ. ಆಕಾಶ್ ಅಗರ್ವಾಲ್ ಅಧಿಕಾರಿಗಳು ಹಾಗೂ ಆಡಳಿತಾರೂಢ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಕ್ಯಾಮೆರಾಗಳ ಎದುರಲ್ಲೇ ಕಣ್ಣೀರಿಟ್ಟಿದ್ದಾರೆ. ಮತದಾನದ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ಮತ್ತು ಬೂತ್ ಕ್ಯಾಪ್ಚರಿಂಗ್ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆಡಳಿತ ಯಂತ್ರ ಹಾಗೂ ಪೊಲೀಸರು ತಮ್ಮ ಬೆಂಬಲಿಗರು ಮತ್ತು ಶಾಲಾ ಆಡಳಿತ ಮಂಡಳಿಯವರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಚುನಾವಣಾ ಕಣದಲ್ಲಿ ತಮಗೆ ಮತ್ತು ತಮ್ಮ ಬೆಂಬಲಿಗರಿಗೆ ಎದುರಾಗಿರುವ ಕಿರುಕುಳವನ್ನು ಸಹಿಸಲಾಗದೆ ಅತ್ಯಂತ ಭಾವುಕರಾದ ಆಕಾಶ್ ಅಗರ್ವಾಲ್, "ನನ್ನನ್ನು ಪಾಕಿಸ್ತಾನದಿಂದ ಬಂದಿರುವ ಉಗ್ರನಂತೆ ನಡೆಸಿಕೊಳ್ಳಲಾಗುತ್ತಿದೆ. ಇಂತಹ ಸನಾತನ ಧರ್ಮದಲ್ಲಿ ಬದುಕಲು ನನಗೆ ಇಷ್ಟವಿಲ್ಲ. ಮುಂದಿನ ತಿಂಗಳು ಲಕ್ನೋದ ಶಾಹಿ ಈದ್ಗಾಗೆ ತೆರಳಿ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಗೆಲುವು ಅಥವಾ ಸೋಲು ತಮಗೆ ಮುಖ್ಯವಲ್ಲ ಎಂದಿರುವ ಅವರು, ತಾವು ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿದ್ದು, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಅಥವಾ ಯಾವ ಧರ್ಮವನ್ನು ಅನುಸರಿಸಬೇಕು ಎಂಬುದನ್ನು ತಾವೇ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಮತದಾನದ ಸಂದರ್ಭದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಅವರು ಆಗ್ರಾ ವಿಭಾಗೀಯ ಆಯುಕ್ತ ನಗೇಂದ್ರ ಪ್ರತಾಪ್ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ತಮ್ಮ ಪರವಾಗಿ ನಿಂತಿರುವ ಸುಮಾರು 12 ಜಿಲ್ಲೆಗಳ ಶಾಲಾ ವ್ಯವಸ್ಥಾಪಕರು ಹಾಗೂ ಶಿಕ್ಷಕರನ್ನು ಪೊಲೀಸರು ಪದೇ ಪದೇ ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ತಮ್ಮ ಮೇಲೆ ಕ್ರಮ ಕೈಗೊಳ್ಳುವುದಿದ್ದರೆ ನೇರವಾಗಿ ಜೀವಾವಧಿ ಶಿಕ್ಷೆ ನೀಡಿ, ಆದರೆ ತಮ್ಮೊಂದಿಗೆ ಗುರುತಿಸಿಕೊಂಡಿರುವ ಮುಗ್ಧ ಶಿಕ್ಷಕರನ್ನು ಹಾಗೂ ಸಹೋದ್ಯೋಗಿಗಳನ್ನು ತೊಂದರೆಗೊಳಿಸಬೇಡಿ ಎಂದು ವಿನಂತಿಸಿದ್ದಾರೆ. ಈ ಹಿಂದೆ 2020ರ ಎಂಎಲ್ಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆಕಾಶ್ ಅಗರ್ವಾಲ್, ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯು ಹರಿಕಿಶೋರ್ ತಿವಾರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರು ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಂಡು ಕಣಕ್ಕಿಳಿದಿದ್ದರು.

Category
ಕರಾವಳಿ ತರಂಗಿಣಿ