ಪಶ್ಚಿಮ ಬಂಗಾಳ : ದೇಶದಲ್ಲಿ ಆಡಳಿತಾರೂಢ ಸರ್ಕಾರ ಅಥವಾ ರಾಜಕೀಯ ಪಕ್ಷದ ಬದಲಾವಣೆಯು ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯ ಮೂಲಕವೇ ನಡೆಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರತಿಪಾದಿಸಿದ್ದಾರೆ.
ರಾಷ್ಟ್ರಹಿತಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಬೆಂಬಲಿಸಿದ ಅವರು, ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಹಾಗೂ ಚುನಾವಣಾ ಪ್ರಕ್ರಿಯೆಗಳನ್ನು ಗೌರವಿಸುವುದು ಪ್ರತಿಯೊಬ್ಬರ ಅತ್ಯಗತ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಭಾರತವು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಬಾಂಗ್ಲಾದೇಶದಲ್ಲಿ ಸಂಭವಿಸಿದಂತೆ ದಿಢೀರನೆ ಸಾರ್ವಜನಿಕರು ರಾಷ್ಟ್ರಪತಿ ಭವನ ಅಥವಾ ಸಂಸತ್ತಿಗೆ ನುಗ್ಗುವಂತಹ ಸ್ಥಿತಿ ಇಲ್ಲಾಗಲು ಸಾಧ್ಯವಿಲ್ಲ ಎಂದಿದ್ದಾರೆ. ದೇಶದ ಶೇ. 80 ರಷ್ಟು ಸಾರ್ವಜನಿಕರು ಇಂತಹ ಅನಾರೋಗ್ಯಕರ ಕೃತ್ಯಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ. ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಕೂಡಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿ ನಡೆದ ವಿಜಯದಶಮಿ ಆಚರಣೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸರ್ವಸಮ್ಮತಿ ಮೂಡಿಸುವ ಪ್ರಯತ್ನಗಳ ನಡುವೆ, ದೇಶದ ಹಿತಾಸಕ್ತಿಗಾಗಿ ರಾಜಕೀಯ ಪಕ್ಷಗಳು ಒಂದಾಗಬೇಕು ಮತ್ತು ಸಮಾಜವನ್ನು ಒಡೆಯುವ ಶಕ್ತಿಗಳನ್ನು ಎದುರಿಸಲು 'ರಾಷ್ಟ್ರ ಮೊದಲು' ಎಂಬ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿತ್ತು.
ಇದೇ ವೇಳೆ ಭಾರತದ ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರದ ಅಭಿವೃದ್ಧಿಯನ್ನು ಉಲ್ಲೇಖಿಸಿದ ಸುವೇಂದು ಅಧಿಕಾರಿ, ಹಿಂದೆ ಭಾರತವು ರಕ್ಷಣಾ ಉಪಕರಣಗಳಿಗಾಗಿ ವಿದೇಶಗಳನ್ನು ನೆಚ್ಚಿಕೊಂಡಿತ್ತು, ಆದರೆ ಇಂದು 50 ಕ್ಕೂ ಹೆಚ್ಚು ದೇಶಗಳು ಭಾರತದಿಂದ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿವೆ ಎಂದು ಹೇಳಿದರು. ಅಲ್ಲದೆ, 2014 ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ 12 ನೇ ಸ್ಥಾನದಲ್ಲಿದ್ದ ಭಾರತವು ಪ್ರಸ್ತುತ 4 ನೇ ಸ್ಥಾನಕ್ಕೇರಿದ್ದು, ಶೀಘ್ರದಲ್ಲೇ 3 ನೇ ಸ್ಥಾನದತ್ತ ಧಾವಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.