ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ವಿಶೇಷ ದಿನವಾದ ನವೆಂಬರ್ 1ರಂದು ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಲೋಕಾರ್ಪಣೆಗೊಳ್ಳಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಡುವ ಈ ರೈಲು ಮುಂಬೈ ಸಿಎಸ್ಎಂಟಿ ತಲುಪಲಿದ್ದು, ಸುಮಾರು 1,118 ಕಿಲೋಮೀಟರ್ ದೂರದ ಈ ಪ್ರಯಾಣಕ್ಕೆ 16 ಗಂಟೆಗಳನ್ನು ತೆಗೆದುಕೊಳ್ಳಲಿದೆ.
ಈ ರೈಲು ವಾರದಲ್ಲಿ 6 ದಿನಗಳು ಕಲಬುರಗಿ ಮಾರ್ಗವಾಗಿ ಸಂಚರಿಸಲಿದ್ದು, ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ಪ್ರಮುಖ ನಿಲುಗಡೆಗಳನ್ನು ಹೊಂದಿದೆ. ಪ್ರಸ್ತುತ ಇರುವ ಉದ್ಯಾನ ಎಕ್ಸ್ಪ್ರೆಸ್ ರೈಲಿಗಿಂತ ಇದು ಸುಮಾರು 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿತಾಯ ಮಾಡಲಿದೆ. ಒಟ್ಟು 16 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಎಸಿ 3-ಟೈರ್, ಎಸಿ 2-ಟೈರ್ ಹಾಗೂ ಎಸಿ ಫಸ್ಟ್ ಕ್ಲಾಸ್ ಸೇರಿದಂತೆ 823 ಸೀಟುಗಳ ಸಾಮರ್ಥ್ಯವಿದ್ದು, ಕವಚ್ ಸುರಕ್ಷತಾ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲುಗಳು, ಸಿಸಿಟಿವಿ, ಮತ್ತು ಅತ್ಯಾಧುನಿಕ ಶೌಚಾಲಯಗಳಂತಹ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.