ನವದೆಹಲಿ: ಮಾದಕ ವಸ್ತುಗಳ ದುರುಪಯೋಗವು ದೇಶದ ಮುಂದಿನ ಪೀಳಿಗೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ 2029ರ ಡಿಸೆಂಬರ್ 31ರ ವೇಳೆಗೆ ದೇಶಾದ್ಯಂತ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ನಿಗದಿಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವಂತೆ ಅವರು ಪೊಲೀಸ್ ಪಡೆಗಳಿಗೆ ಕರೆ ನೀಡಿದ್ದಾರೆ.
ಪೋಲಿಸ್ ಸ್ಮರಣ ದಿನದ ಅಂಗವಾಗಿ ಇಲ್ಲಿನ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, 2026ರ ಉಳಿದ ತಿಂಗಳುಗಳು ಹಾಗೂ 2027, 2028 ಮತ್ತು 2029ನೇ ವರ್ಷಗಳನ್ನು ಮಾದಕ ವಸ್ತುಗಳ ವಿರುದ್ಧದ ಸಂಘಟಿತ ಹೋರಾಟಕ್ಕಾಗಿ ಮೀಸಲಿಡಲಾಗುವುದು ಎಂದು ಹೇಳಿದರು. ಈ ಅಭಿಯಾನವನ್ನು ರಾಷ್ಟ್ರೀಯ ಆದ್ಯತೆ ಎಂದ ಅವರು, ಮಾದಕ ವಸ್ತುಗಳ ಹಾವಳಿಯು ಆರ್ಥಿಕತೆಯ ಮೇಲೆ ಅನಗತ್ಯ ಹೊರೆ ಬೀರುವಂತೆ ಮಾಡುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ದೇಶದಲ್ಲಿ ದಶಕಗಳ ಕಾಲದಿಂದಿದ್ದ ನಕ್ಸಲಿಸಂ ಅನ್ನು 2026ರ ಮಾರ್ಚ್ 31ರ ವೇಳೆಗೆ ಯಶಸ್ವಿಯಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. 1981ರಿಂದ 2026ರ ಮಾರ್ಚ್ವರೆಗಿನ ನಕ್ಸಲ್ ಹಿಂಸಾಚಾರದಲ್ಲಿ 3,600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ಸುಮಾರು 13,700 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದ ಅವರು, ನಕ್ಸಲ್ ನಿಗ್ರಹ ಕಾರ್ಯಚರಣೆಯಲ್ಲಿ ಛತ್ತೀಸ್ಗಢ ಪೊಲೀಸ್, ಸಿಆರ್ಪಿಎಫ್, ಕೋಬ್ರಾ ಪಡೆಯ ಪಾತ್ರವನ್ನು ಶ್ಲಾಘಿಸಿದರು.
1959ರ ಅಕ್ಟೋಬರ್ 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಚೀನೀ ಪಡೆಗಳ ದಾಳಿಗೆ ಹುತಾತ್ಮರಾದ 10 ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ವಿರುದ್ಧದ ಜಾಗೃತಿಯ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ ಅಕ್ಟೋಬರ್ 31ರಂದು ಗುಜರಾತ್ನ ಏಕತಾ ನಗರದಲ್ಲಿ ನಡೆಯಲಿರುವ ಏಕತಾ ಪೆರೇಡ್ಗೆ ತೆರಳಲಿರುವ 'ಮಾದಕ ವಸ್ತುಗಳ ವಿರುದ್ಧ ಹೋರಾಡಿ' ಎಂಬ ವಿಷಯಾಧಾರಿತ ಮೋಟಾರ್ಸೈಕಲ್ ರ್ಯಾಲಿಗೆ ಅಮಿತ್ ಶಾ ಹಸಿರು ನಿಶಾನೆ ತೋರಿದರು.