ನಾಗಪುರ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು 'ಆಡಳಿತ ಬದಲಾವಣೆ'ಯ (Regime Change) ಕಡೆಗೆ ತಿರುಗುತ್ತಿರುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಬೇಸರ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.
ಆಡಳಿತ ಬದಲಾವಣೆಯ ಉದ್ದೇಶದಿಂದ ನಡೆಸುವ ಹೋರಾಟಗಳು ದೇಶದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ತರುವುದಿಲ್ಲ ಎಂದು ಎಚ್ಚರಿಸಿರುವ ಅವರು, ಇಂತಹ ಹೋರಾಟಗಳು ಕೆಲವೇ ರಾಜಕೀಯ ಹಿತಾಸಕ್ತಿಗಳ ದಾಳಕ್ಕೆ ಸಿಲುಕಿ ಸಮಾಜದಲ್ಲಿ ಬಿರುಕು ಮೂಡಿಸುವ ಅಪಾಯವನ್ನು ಹೊಂದಿರುತ್ತವೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ನಾಗರಿಕರ ಹಕ್ಕಾಗಿದ್ದರೂ, ಸಮಾಜದಲ್ಲಿ ವೈಷಮ್ಯ ಬೆಳೆಸುವುದು ಅದರ ಉದ್ದೇಶವಾಗಬಾರದು. ಬದಲಿಗೆ ರಚನಾತ್ಮಕ ಹಾಗೂ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವುದೇ ಪ್ರಜಾಸತ್ತಾತ್ಮಕ ಹೋರಾಟಗಳ ನಿಜವಾದ ಗುರಿಯಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕೇವಲ ಸರಕಾರ ಅಥವಾ ಆಡಳಿತ ಬದಲಿಸುವುದರಿಂದ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ವಾದವು ಎಂದಿಗೂ ಸಫಲವಾಗಿಲ್ಲ. ಸ್ವಾರ್ಥ ಹಿತಾಸಕ್ತಿ ಹೊಂದಿರುವ ಶಕ್ತಿಗಳು ಯಾವಾಗಲೂ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಕೆಲವರನ್ನು ಕಾಯಿಗಳಂತೆ ಬಳಸಿಕೊಳ್ಳುತ್ತವೆ. ವಿಶ್ವದ ವಿವಿಧ ಭಾಗಗಳಲ್ಲಿ ಇಂತಹ ಚಟುವಟಿಕೆಗಳು ಸಕ್ರಿಯವಾಗಿದ್ದು, ಭಾರತವೂ ಇಂತಹ ಕೃತ್ಯಗಳಿಗೆ ಬಲಿಯಾಗದಂತೆ ತಡೆದು ನಿಂತಿದೆ. ಇದೇ ಕಾರಣಕ್ಕೆ ಇಂದು ಭಾರತವನ್ನು ವಿದೇಶಿ ಹಾಗೂ ವಿಘಟನಾ ಶಕ್ತಿಗಳು ಗುರಿಯಾಗಿಸುತ್ತಿವೆ ಎಂದು ಭಾಗವತ್ ಆರೋಪಿಸಿದ್ದಾರೆ.