ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಎನ್ಡಿಎ ಮೈತ್ರಿಕೂಟದ ಪಾಳಯಕ್ಕೆ ಸೇರ್ಪಡೆಗೊಂಡಿರುವ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾನ್ಗೆ ಗುಜರಾತ್ ಸರ್ಕಾರದಿಂದ ದೊಡ್ಡ ಮಟ್ಟದ ರಾಜಕೀಯ ಉಡುಗೊರೆ ಸಿಕ್ಕಿದೆ. ವಡೋದರಾದ ತಂದಲ್ಜಾ ಪ್ರದೇಶದಲ್ಲಿರುವ ಅವರ ಮನೆಯ ಪಕ್ಕದಲ್ಲೇ ಇರುವ ಮತ್ತು ಕಳೆದ 2012ರಿಂದ ಕಾನೂನು ಹಾಗೂ ಆಡಳಿತಾತ್ಮಕ ವಿವಾದದಲ್ಲಿದ್ದ ಸುಮಾರು 978 ಚದರ ಮೀಟರ್ ವಿಸ್ತೀರ್ಣದ ವಿವಾದಿತ ಭೂಮಿಯನ್ನು ಅವರಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಪ್ರಸ್ತಾವಿತ ಒಪ್ಪಂದದ ಪ್ರಕಾರ, ವಡೋದರಾ ಮಹಾನಗರ ಪಾಲಿಕೆ ವ್ಯಾಪ್ತಿಯ ಈ ಜಮೀನಿನಲ್ಲಿ 500 ಚದರ ಮೀಟರ್ ಭೂಮಿಯನ್ನು ಯೂಸುಫ್ ಪಠಾನ್ಗೆ ಉಡುಗೊರೆಯಾಗಿ ನೀಡಲಾಗುತ್ತಿದ್ದು, ಉಳಿದ ಭೂಮಿಯನ್ನು ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿರುವ ತಮಗೆ ಭದ್ರತೆಯ ಅಗತ್ಯವಿದೆ ಎಂದು ಕಾರಣ ನೀಡಿ ಪಠಾನ್ ಕುಟುಂಬವು 2012ರಲ್ಲೇ ಈ ಭೂಮಿಯ ಸ್ವಾಧೀನ ಕೋರಿತ್ತು. ಇತ್ತೀಚೆಗೆ ಟಿಎಂಸಿ ವಿರುದ್ಧ ಬಂಡಾಯವೆದ್ದು ಎನ್ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡ ಬಳಿಕ, ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಈ ಭೂವಿವಾದಕ್ಕೆ ಈಗ ಅಧಿಕೃತವಾಗಿ ತೆರೆಬಿದ್ದಿದೆ.