ನವದೆಹಲಿ : ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೇಶದ ಪೂರ್ವ ಹಾಗೂ ದಕ್ಷಿಣ ಭಾಗ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಅಕ್ಟೋಬರ್ 13ರ ಸುಮಾರಿಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಸಾಧ್ಯತೆಯಿದ್ದು, ಅಂಡಮಾನ್ ಸಮುದ್ರದ ಕಡೆಗೆ ಚಲಿಸುತ್ತಿರುವ ಮಲಕ್ಕಾ ಜಲಸಂಧಿಯ ವಾಯುಭಾರ ಪರಿಚಲನೆಯು ಇದಕ್ಕೆ ಪ್ರಮುಖ ಕಾರಣವಾಗಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ ಹಾಗೂ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 30 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಬಿಹಾರದ ಕೆಲವು ಕಡೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ನಿರೀಕ್ಷೆಯಿದ್ದು, ಮನಾಲಿಯಲ್ಲಿ ತಾಪಮಾನ ತೀವ್ರವಾಗಿ ಕುಸಿಯಲಿದೆ.
ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲೂ ಅಕ್ಟೋಬರ್ 16ರವರೆಗೆ ಮಳೆ ಮುಂದುವರಿಯಲಿದ್ದು, ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಗಾಳಿ ಸಹಿತ ಮಳೆಯಾಗುವ ಸಂಭವವಿದ್ದು, ಸಾರ್ವಜನಿಕರು ಹಾಗೂ ಮೀನುಗಾರರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.