ನವದೆಹಲಿ : ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ Gen Z ಯುವಕರನ್ನು ಬಳಸಿಕೊಂಡು ದೇಶದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಕಾಕ್ರೋಚ್ ಜನತಾ ಪಕ್ಷ (CJP) ಆರಂಭಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆಯವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದು ಬಿಜೆಪಿ ನಾಯಕರು ಮತ್ತು ಬೆಂಬಲಿಗರ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಪ್ರಸಿದ್ಧ ಪತ್ರಕರ್ತೆ ಆರ್ಫಾ ಖಾನಮ್ ಶರ್ವಾಣಿ ಅವರ ಯೂಟ್ಯೂಬ್ ಚಾನಲ್ಗೆ ನಾಲ್ಕು ತಿಂಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ದೀಪ್ಕೆ ಆಡಿರುವ ಮಾತುಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಕಾಕ್ರೋಚ್ ಜನತಾ ಪಕ್ಷವು ಅಷ್ಟೇನು ಜನಪ್ರಿಯತೆ ಪಡೆಯದ ಹಾಗೂ ಯಾವುದೇ ಪ್ರತಿಭಟನೆಗಳು ಆರಂಭವಾಗದ ಆರಂಭಿಕ ದಿನಗಳಲ್ಲಿ ಈ ಸಂದರ್ಶನ ನಡೆದಿತ್ತು.
ಈ ಸಂದರ್ಶನದಲ್ಲಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿರುವ ಅಭಿಜೀತ್ ದೀಪ್ಕೆ, ನನ್ನ ಏಕೈಕ ಉದ್ದೇಶ ಭಾರತದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಇರಬಾರದು ಎನ್ನುವುದಾಗಿದೆ. ತಾನು ಆಮ್ ಆದ್ಮಿ ಪಕ್ಷದ ಬೆಂಬಲಿಗನಾಗಿದ್ದು, ಬಿಜೆಪಿಯನ್ನು ಈ ದೇಶದಿಂದ ಓಡಿಸುವುದೇ ತನ್ನ ಗುರಿ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದಲೂ ಕಾಂಗ್ರೆಸ್ ಪರವಾಗಿ ಗುರುತಿಸಿಕೊಂಡು, ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿರೋಧಿಸುವ ಕೆಲಸವನ್ನೇ ಮಾಡಿಕೊಂಡು ಬಂದಿರುವುದಾಗಿ ಅವರು ತಿಳಿಸಿದ್ದಾರೆ. ತಮಾಷೆಯಾಗಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷವು ಈಗ ತನಗೆ ಬಿಜೆಪಿಯನ್ನು ಅಧಿಕಾರದಿಂದ ಓಡಿಸಲು ಸಿಕ್ಕಿರುವ ದೊಡ್ಡ ಅವಕಾಶವಾಗಿದ್ದು, ಇದೇ ತನ್ನ ಮುಖ್ಯ ಅಜೆಂಡಾ ಎಂದು ಅವರು ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.
ಶಿಕ್ಷಣದ ಉದ್ಧಾರದ ಹೆಸರಿನಲ್ಲಿ ಹಾಗೂ ಎಸ್ಐಆರ್ (SIR) ನಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿಜೀತ್ ದೀಪ್ಕೆ ಮತ್ತು ಯೂಟ್ಯೂಬರ್ ಧ್ರುವ್ ರಾಠಿಯಂತಹವರು ಭಾರತದಲ್ಲಿ ಹೂಡುತ್ತಿರುವ ಅಜೆಂಡಾ ಏನು ಎಂಬುದು ಈ ವಿಡಿಯೋದ ಮೂಲಕ ಸ್ಪಷ್ಟವಾಗಿದೆ ಎಂದು ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.