image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಯುವಜನರಿಗೆ ಹೆದರುವುದಿದ್ದರೆ ಇಡೀ ದೇಶವನ್ನೇ ಬಂದ್ ಮಾಡಿ: ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

ಯುವಜನರಿಗೆ ಹೆದರುವುದಿದ್ದರೆ ಇಡೀ ದೇಶವನ್ನೇ ಬಂದ್ ಮಾಡಿ: ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

ಮುಂಬೈ : ನವದೆಹಲಿಯಲ್ಲಿ ಅಕ್ಟೋಬರ್ 10ರಂದು ಸಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸುವ ರೈಲುಗಳನ್ನು ರದ್ದುಗೊಳಿಸಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಯುವಜನರಿಗೆ ಭಯಪಡುವುದಿದ್ದರೆ ಸರ್ಕಾರ ಇಡೀ ದೇಶವನ್ನೇ ಬಂದ್ ಮಾಡಲಿ ಎಂದು ಕಿಡಿಕಾರಿದ್ದಾರೆ. ಜಂತರ್ ಮಂತರ್ ಪ್ರತಿಭಟನೆಗೆಂದೇ ನಿಗದಿಯಾಗಿರುವ ಸ್ಥಳವಾಗಿದ್ದು, ಅಲ್ಲಿ ಧರಣಿ ನಡೆಸಲು ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ರೈಲುಗಳ ರದ್ದತಿಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಅಧಿಕೃತಗೊಳಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ. ಅಕ್ಟೋಬರ್ 9ರಂದು ಮೂಲ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಯ ನಂತರ ಹೊರಟು, ಅಕ್ಟೋಬರ್ 10ರಂದು ನವದೆಹಲಿ ಹಾಗೂ ಹಝ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳನ್ನು ಮುಂಜಾನೆ 4ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ತಲುಪಬೇಕಿದ್ದ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಬೋರ್ಡ್ ಪ್ರಕಟಣೆ ತಿಳಿಸಿದೆ. ಈ ನಡುವೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸರು ಸಿಜೆಪಿಗೆ ಅನುಮತಿ ನಿರಾಕರಿಸಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಲವು ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿರುವ ದೀಪ್ಕೆ, "ಮೋದಿಯವರೇ ನಿಮ್ಮ ಬೆದರಿಕೆಗೆ ಈ ದೇಶದ ಜನರು ಅಂಜುವುದಿಲ್ಲ. ನಾಳೆ ಬೆಳಿಗ್ಗೆ ನಾನು ದೆಹಲಿಗೆ ತಲುಪುತ್ತಿದ್ದು, ಏನೇ ಆದರೂ ಜಂತರ್ ಮಂತರ್‌ಗೆ ಮೆರವಣಿಗೆಯ ಮೂಲಕ ತೆರಳುತ್ತೇನೆ" ಎಂದು ಸವಾಲು ಹಾಕಿದ್ದಾರೆ.

Category
ಕರಾವಳಿ ತರಂಗಿಣಿ