ಉತ್ತರ ಪ್ರದೇಶ : ಉತ್ತರ ಪ್ರದೇಶದಿಂದ ಮುಂಬರುವ ರಾಜ್ಯಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಹಾಗೂ ಬಿ.ಎಲ್. ವರ್ಮಾ ಸೇರಿದಂತೆ ಹಾಲಿ ಇರುವ ಯಾವುದೇ ರಾಜ್ಯಸಭಾ ಸಂಸದರಿಗೂ ಈ ಬಾರಿ ಟಿಕೆಟ್ ನೀಡದೆ, ಸಂಪೂರ್ಣವಾಗಿ ಹೊಸ ಮುಖಗಳಿಗೆ ಪಕ್ಷ ಮಣೆ ಹಾಕಿದೆ.
ಅಕ್ಟೋಬರ್ 16ರಂದು ನಡೆಯಲಿರುವ ಈ ಚುನಾವಣೆಗೆ ಧರಂಪಾಲ್ ಸಿಂಗ್, ರಾಧಾಕಾಂತ್ ಓಜಾ, ಪ್ರಕಾಶ್ ಪಾಲ್, ವಿದ್ಯಾಸಾಗರ್ ಸೋಂಕರ್, ಗೋಪಿ ಕೃಷ್ಣ ಪಾಂಡೆ, ಪ್ರಿಯಾಂಕಾ ಸಿಂಗ್ ರಾವತ್, ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಹಾಗೂ ಶ್ರುತಿ ಗಂಗಾವಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಾಲಿ ಸಂಸದರಾಗಿದ್ದ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಬಿ.ಎಲ್. ವರ್ಮಾ ಅವರಲ್ಲದೆ ಅರುಣ್ ಸಿಂಗ್, ಸೀಮಾ ದ್ವಿವೇದಿ, ನೀರಜ್ ಶೇಖರ್, ಬ್ರಿಜ್ ಲಾಲ್ ಹಾಗೂ ಗೀತಾ ಶಾಕ್ಯ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಇನ್ನು ಉತ್ತರ ಪ್ರದೇಶದಿಂದ ಹಿಂದೆ ರಾಜ್ಯಸಭಾ ಸಂಸದರಾಗಿದ್ದ ದಿನೇಶ್ ಶರ್ಮಾ ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಪರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದ ಒಟ್ಟು 10 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಮತದಾನ ನಡೆಯಲಿದ್ದು, ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ 8 ಹಾಗೂ ಸಮಾಜವಾದಿ ಪಾರ್ಟಿ (SP) 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಮತ್ತು ನಾಯಕರಿಗೆ ಈ ಪಟ್ಟಿಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಪೂರ್ವ ಉತ್ತರ ಪ್ರದೇಶದ ದಲಿತ ನಾಯಕ ಹಾಗೂ ಮಾಜಿ ಎಂಎಲ್‌ಸಿ ವಿದ್ಯಾಸಾಗರ್ ಸೋಂಕರ್ ಮತ್ತು ಕಾನ್ಪುರ-ಬುಂದೇಲ್‌ಖಂಡ್ ವಲಯದ ಮಾಜಿ ಮುಖ್ಯಸ್ಥ ಪ್ರಕಾಶ್ ಪಾಲ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ 2026ರ ಜೂನ್‌ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು, ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿದ್ದ ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಅವರಿಗೂ ಬಿಜೆಪಿ ಟಿಕೆಟ್ ಘೋಷಿಸಿದೆ. ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಸಮೀಕರಣವನ್ನು ಸರಿದೂಗಿಸಲು ಈ ಹೊಸ ಮುಖಗಳ ಆಯ್ಕೆ ನಡೆಸಲಾಗಿದೆ.