image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಂಡಾಯ ನಾಯಕರಿಗೆ ಮಮತಾ 15 ದಿನಗಳ ಗಡುವು: ಟಿಎಂಸಿಗೆ ವಾಪಸ್ ಬರದಿದ್ದರೆ ಕ್ಷಮೆ ಇಲ್ಲ ಎಂದ ಮಾಜಿ ಸಿಎಂ

ಬಂಡಾಯ ನಾಯಕರಿಗೆ ಮಮತಾ 15 ದಿನಗಳ ಗಡುವು: ಟಿಎಂಸಿಗೆ ವಾಪಸ್ ಬರದಿದ್ದರೆ ಕ್ಷಮೆ ಇಲ್ಲ ಎಂದ ಮಾಜಿ ಸಿಎಂ

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಪಕ್ಷದಲ್ಲಿ ಅಭೂತಪೂರ್ವ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಪಕ್ಷದ 20 ಸಂಸದರು ಟಿಎಂಸಿಯಿಂದ ಹೊರಬಂದು 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' ಸೇರ್ಪಡೆಯಾಗಿದ್ದು, ಲೋಕಸಭೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಮಧ್ಯೆ, ಪಕ್ಷ ತೊರೆದಿರುವ ಶಾಸಕರು ಹಾಗೂ ಸಂಸದರಿಗೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15 ದಿನಗಳ ಗಡುವು ನೀಡಿದ್ದು, ತಕ್ಷಣವೇ ವಾಪಸ್ ಬರುವಂತೆ ಕರೆ ನೀಡಿದ್ದಾರೆ.

ಉತ್ತರ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದ ಟಿಎಂಸಿ ಕಾರ್ಯಕರ್ತರ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮೊಬೈಲ್ ಫೋನ್ ಮೂಲಕ ಮಾತನಾಡಿದ ಮಮತಾ ಬ್ಯಾನರ್ಜಿ, ಬಂಡಾಯ ಎದ್ದಿರುವ ನಾಯಕರ ವಿರುದ್ಧ ಕಿಡಿಕಾರಿದರು. "ನಮ್ಮ ಪಕ್ಷದ ಚಿಹ್ನೆಯ ನೆರವಿನಿಂದ ಗೆದ್ದು ಬಂದ ಅನೇಕ ಶಾಸಕರು ಮತ್ತು ಸಂಸದರು ಈಗ ಪಕ್ಷದ್ರೋಹಿಗಳಾಗಿದ್ದಾರೆ. ಅವರ ಗೆಲುವಿಗೆ ನಾನು ಆತ್ಮಸಾಕ್ಷಿಯಾಗಿ ಶ್ರಮಿಸಿದ್ದೆ. ಪಕ್ಷ ತೊರೆದಿರುವ ನಾಯಕರು 15 ದಿನಗಳೊಳಗೆ ವಾಪಸ್ ಬಂದರೆ ಕ್ಷಮಿಸುತ್ತೇನೆ, ಇಲ್ಲದಿದ್ದರೆ ಅವರಿಗೆ ಪಕ್ಷದಲ್ಲಿ ಮತ್ತೆಂದೂ ಜಾಗವಿರುವುದಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಜ್ಞಾನೇಶ್ ಕುಮಾರ್ ಅವರು ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿರುವವರೆಗೆ ಬಿಜೆಪಿ ಚುನಾವಣೆ ಗೆಲ್ಲುತ್ತಲೇ ಇರುತ್ತದೆ. 1988ರಲ್ಲಿ ಪಕ್ಷ ಸ್ಥಾಪಿಸಿ ಅಧಿಕಾರ ಹಿಡಿದಿದ್ದ ನಾವು, ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಪಕ್ಷದ ಜೀವಾಳ ನಾಯಕರಲ್ಲ, ಕಾರ್ಯಕರ್ತರು" ಎಂದರು. ಅಲ್ಲದೆ, ತೃಣಮೂಲ ಕಾಂಗ್ರೆಸ್ ಇಲ್ಲದೆ 'ಇಂಡಿಯಾ' ಒಕ್ಕೂಟ ಬಲಗೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿಯನ್ನು ಎದುರಿಸಲು ಟಿಎಂಸಿ ಬಲವರ್ಧನೆ ಅಗತ್ಯ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸುಮಾರು ಮೂರೂವರೆ ದಶಕಗಳ ಕಮ್ಯೂನಿಸ್ಟ್ ಆಡಳಿತವನ್ನು ಅಂತ್ಯಗೊಳಿಸಿ, 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡಿತ್ತು. ಖುದ್ದು ಮಮತಾ ಬ್ಯಾನರ್ಜಿ ಅವರೇ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ, ಪಕ್ಷದೊಳಗೆ ಬಂಡಾಯ ತೀವ್ರಗೊಂಡಿತ್ತು. ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲಿನ ಆಕ್ರೋಶ, ಬ್ಯಾಂಕ್ ಖಾತೆಗಳ ಫ್ರೀಜ್ ಹಾಗೂ ಬಂಡಾಯ ನಾಯಕರ ಪ್ರತ್ಯೇಕ ಪಟ್ಟುಗಳಿಂದಾಗಿ ಮಮತಾ ಬ್ಯಾನರ್ಜಿ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಂತದಲ್ಲಿ ಅವರು ನೀಡಿರುವ 15 ದಿನಗಳ ಎಚ್ಚರಿಕೆಯ ಸಂದೇಶ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Category
ಕರಾವಳಿ ತರಂಗಿಣಿ