ನವದೆಹಲಿ : ಔಷಧಗಳ ನೈಜ ಖರೀದಿ ವೆಚ್ಚ (PTR) ಹಾಗೂ ಮಾರುಕಟ್ಟೆಯಲ್ಲಿ ನಿಗದಿಪಡಿಸುವ ಗರಿಷ್ಠ ಚಿಲ್ಲರೆ ಬೆಲೆ (MRP) ನಡುವಿನ ಅತಿಯಾದ ವ್ಯತ್ಯಾಸಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು "ಹಗಲು ದರೋಡೆ" ಹಾಗೂ "ಸಾರ್ವಜನಿಕರ ಮೇಲಿನ ದೌರ್ಜನ್ಯ" ಎಂದು ಕಟುವಾಗಿ ಟೀಕಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಎಲ್ಲಾ ರೀತಿಯ ಔಷಧಗಳ ಎಂಆರ್ಪಿ ಮೇಲೆಯೂ ಕಡ್ಡಾಯವಾಗಿ ಗರಿಷ್ಠ ಶೇ. 16ರಷ್ಟು ಲಾಭದ (Margin) ಮಿತಿಯನ್ನು ಏಕೆ ಜಾರಿಗೆ ತರಬಾರದು ಎಂದು ಕೇಂದ್ರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದೆ.
ವಿಚಾರಣೆ ವೇಳೆ ಆಘಾತಕಾರಿ ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗೆ ಕೇವಲ ₹3,520ಕ್ಕೆ ಸಿಗುವ ಇಂಜೆಕ್ಷನ್ ಎಂಆರ್ಪಿ ₹22,437 ಹಾಗೂ ₹2,700 ರಿಂದ ₹3,000ಕ್ಕೆ ಸಿಗುವ ಅತ್ಯಂತ ಜೀವರಕ್ಷಕ ಕ್ಯಾನ್ಸರ್ ಔಷಧಿಯ ಎಂಆರ್ಪಿ ₹27,000 ರಷ್ಟಿರುವುದನ್ನು ಬೆಟ್ಟುಮಾಡಿದೆ. ಖರೀದಿ ದರಕ್ಕಿಂತ 10 ಪಟ್ಟು ಹೆಚ್ಚಿನ ಹಣ ಯಾರ ಜೇಬು ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, ಈ ಅಪಾರ ದರ ವ್ಯತ್ಯಾಸವು ಸಾಮಾನ್ಯ ರೋಗಿಗಳು ಮತ್ತು ತೆರಿಗೆದಾರರ ಮೇಲಿನ ಶೋಷಣೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಖಾಸಗಿ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳು ತಮ್ಮದೇ ಆಂತರಿಕ ಫಾರ್ಮಸಿಗಳಿಂದ ಔಷಧಗಳನ್ನು ಖರೀದಿಸುವಂತೆ ರೋಗಿಗಳನ್ನು ಬಲವಂತಪಡಿಸುವ ದಂಧೆಯನ್ನು ಕೋರ್ಟ್ ತೀವ್ರವಾಗಿ ವಿಮರ್ಶಿಸಿದೆ. ರೋಗಿಯ ಸಂಬಂಧಿಕರು ಹೊರಗಿನಿಂದ ಕಡಿಮೆ ದರಕ್ಕೆ ಅದೇ ಔಷಧ ತಂದರೆ 'ಚಿಕಿತ್ಸೆಯ ಭರವಸೆ ನೀಡಲಾಗುವುದಿಲ್ಲ' ಎಂದು ಹೆದರಿಸುವುದು ಹಾಗೂ ಬಿಲ್ ಪಾವತಿಯಾಗದಿದ್ದರೆ ಮೃತದೇಹವನ್ನೂ ನೀಡದಿರುವಂತಹ ಪರಿಸ್ಥಿತಿಗಳ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿತು. ಅಲ್ಲದೆ, ಅಗತ್ಯ ಸರಕುಗಳ ಕಾಯ್ದೆಯಡಿ ಬರುವ ಜೀವರಕ್ಷಕ ಸಾಧನಗಳು ಹಾಗೂ ಔಷಧಗಳನ್ನು 'ಔಷಧ ಬೆಲೆ ನಿಯಂತ್ರಣ ಆದೇಶ'ದ (DPCO) ವ್ಯಾಪ್ತಿಯಿಂದ ಹೊರಗಿಟ್ಟಿರುವುದೇಕೆ ಎಂದೂ ಪೀಠ ಪ್ರಶ್ನಿಸಿತು.
ಕೋರ್ಟ್ ನೀಡಿರುವ ಏಕರೂಪದ ಶೇ. 16ರಷ್ಟು ಲಾಭದ ಮಿತಿಯ ಸಲಹೆಯು ತರ್ಕಬದ್ಧವಾಗಿದೆ ಎಂದು ಒಪ್ಪಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯವಾಗಿ ಸಮತೋಲಿತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು. ಕಿಶನ್ ಚಂದ್ ಜೈನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ಮುಂದಿನ ವಿಚಾರಣೆಯನ್ನು ಪೀಠವು ಅಕ್ಟೋಬರ್ ಎರಡನೇ ವಾರಕ್ಕೆ ಮುಂದೂಡಿದೆ.