image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬೈನಲ್ಲಿ 'ಜೈಲ್ ಭರೋ' ಆಂದೋಲನ: ಅಭಿಜೀತ್ ದಿಪ್ಕೆ ಘೋಷಣೆ

ಮುಂಬೈನಲ್ಲಿ 'ಜೈಲ್ ಭರೋ' ಆಂದೋಲನ: ಅಭಿಜೀತ್ ದಿಪ್ಕೆ ಘೋಷಣೆ

ಮುಂಬೈ : ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಲು ಅಕ್ಟೋಬರ್ 2 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಸರ್ಕಾರದ ವಿರುದ್ಧ ನೇರ ಸಮರ ಸಾರಿದ್ದಾರೆ. ಗಾಂಧಿ ಜಯಂತಿಯಂದೇ ಮುಂಬೈನಲ್ಲಿ ಬೃಹತ್ 'ಜೈಲ್ ಭರೋ ಆಂದೋಲನ' ನಡೆಸುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ, ವಿವಾದಾತ್ಮಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ತಡೆಯುವುದು ಹಾಗೂ ಚುನಾವಣಾ ಆಯೋಗದ ಕಾನೂನು ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಬದಲಾವಣೆಗಳನ್ನು ತರುವುದು ಸಿಜೆಪಿಯ ಪ್ರಮುಖ ಬೇಡಿಕೆಯಾಗಿದೆ. ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ಸಭೆಗೆ ಸಿಜೆಪಿ ಸಿದ್ಧತೆ ನಡೆಸಿತ್ತಾದರೂ, 2013 ರ ಬಾಂಬೆ ಹೈಕೋರ್ಟ್ ಆದೇಶ, ಶಬ್ದ ಮಾಲಿನ್ಯ ಹಾಗೂ ಸಂಚಾರ ದಟ್ಟಣೆ ನೆಪವೊಡ್ಡಿ ಮುಂಬೈ ಪೊಲೀಸರು ಮತ್ತು ಬಿಎಂಸಿ ಅನುಮತಿ ನಿರಾಕರಿಸಿದ್ದವು. ಆದರೆ ಪೊಲೀಸರ ಈ ಕ್ರಮಕ್ಕೆ ತಿರುಗೇಟು ನೀಡಿರುವ ಅಭಿಜೀತ್ ದಿಪ್ಕೆ, ಅನುಮತಿ ನಿರಾಕರಣೆಯಿಂದ ಹೋರಾಟ ನಿಲ್ಲುವುದಿಲ್ಲ, ಜೈಲ್ ಭರೋ ಮೂಲಕವೇ ಆಕ್ರೋಶ ಹೊರಹಾಕಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹೋರಾಟಕ್ಕೆ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವ ರೀತಿಯಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಮ್‌ಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಅಕ್ಟೋಬರ್ 4 ರಂದು ಬೈಕುಲ್ಲಾದಿಂದ ಬಿಎಂಸಿ ಪ್ರಧಾನ ಕಚೇರಿಯವರೆಗೆ ಚುನಾವಣಾ ಆಯೋಗದ ವಿರುದ್ಧ ಬೃಹತ್ ಜಂಟಿ ಪ್ರತಿಭಟನಾ ಮೆರವಣಿಗೆಯನ್ನೂ ಘೋಷಿಸಲಾಗಿದೆ. ಚುನಾವಣಾ ಆಯೋಗವು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕುತ್ತಿದ್ದರೂ, ವಿರೋಧ ಪಕ್ಷಗಳು ಮತ್ತು ಯುವ ಸಂಘಟನೆಗಳು ಬೀದಿಗಿಳಿಯುತ್ತಿರುವುದು ರಾಜ್ಯದಲ್ಲಿ ಭಾರೀ ರಾಜಕೀಯ ಸಂಘರ್ಷಕ್ಕೆ ಹಾದಿಮಾಡಿಕೊಟ್ಟಿದೆ.

Category
ಕರಾವಳಿ ತರಂಗಿಣಿ