ಮಧ್ಯಾಪ್ರದೇಶ : ಅಕ್ಟೋಬರ್ ತಿಂಗಳೊಳಗೆ ಶೇಕಡಾ 100ರಷ್ಟು ಎಥೆನಾಲ್‌ನಿಂದಷ್ಟೇ ಚಲಿಸಬಲ್ಲ ಫ್ಲೆಕ್ಸ್ ಇಂಜಿನ್ ಚಾಲಿತ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ‘ಸುಗಮ ಸಾರಿಗೆ ಸೇವೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟಾಟಾ, ಸುಜುಕಿ, ಟೊಯೊಟಾ ಹಾಗೂ ಮಹಿಂದ್ರಾದಂತಹ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಶೇ.100ರಷ್ಟು ಎಥೆನಾಲ್ ಇಂಜಿನ್ ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿವೆ ಎಂದು ಹೇಳಿದರು.
ಈ ಹೊಸ ಕಾರುಗಳಲ್ಲಿ 100% ಎಥೆನಾಲ್ ಇಂಧನ ಬಳಸುವುದರಿಂದ, ಪೆಟ್ರೋಲ್ ಬೆಲೆಗೆ ಹೋಲಿಸಿದರೆ ವಾಹನದ ಸಂಚಾರ ವೆಚ್ಚವು ಪ್ರತಿ ಲೀಟರ್‌ಗೆ ಕೇವಲ ₹25 ತಗುಲಿದಷ್ಟೇ ಅತ್ಯಂತ ಅಗ್ಗವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪ್ರಸ್ತುತ 4 ಕೋಟಿ ಕಾರುಗಳು ಹಾಗೂ 20 ಕೋಟಿ ದ್ವಿಚಕ್ರ ವಾಹನಗಳಿದ್ದು, ತಾವೂ ಕೂಡ 100% ಎಥೆನಾಲ್‌ನಿಂದ ಓಡುವ ಟೊಯೊಟಾ ಇನ್ನೋವಾ ಕಾರನ್ನು ಬಳಸುತ್ತಿರುವುದಾಗಿ ತಿಳಿಸಿದರು.
ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಹಾಗೂ ಹೈಡ್ರೋಜನ್ ಚಾಲಿತ ವಾಹನಗಳತ್ತ ಗಮನ ಹರಿಸುತ್ತಿರುವುದನ್ನು ಉಲ್ಲೇಖಿಸಿದ ಗಡ್ಕರಿ, ತಮ್ಮ ಬಳಿ 5 ಎಲೆಕ್ಟ್ರಿಕ್ ಟ್ರ್ಯಾಕ್ಟರ್‌ಗಳಿದ್ದು, ಕೇವಲ ಎರಡೂವರೆ ಗಂಟೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ಮಾಡುತ್ತವೆ ಎಂದು ತಮ್ಮ ಅನುಭವ ಹಂಚಿಕೊಂಡರು. ಶೀಘ್ರದಲ್ಲಿಯೇ ಹೈಡ್ರೋಜನ್ ಬಸ್ ಮತ್ತು ಟ್ರಕ್‌ಗಳನ್ನು ಪರಿಚಯಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಸ್ವದೇಶಿ ಎಥೆನಾಲ್ ಬಳಕೆಯು ದೇಶಕ್ಕೆ ಬರೋಬ್ಬರಿ ₹22 ಲಕ್ಷ ಕೋಟಿ ಮೌಲ್ಯದ ಇಂಧನವನ್ನು ಉಳಿಸಲಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಡವರು, ಕಾರ್ಮಿಕರು ಹಾಗೂ ರೈತರಿಗೆ ನೇರ ಪ್ರಯೋಜನವಾಗಲಿದೆ. ಎಥೆನಾಲ್ ತಯಾರಿಕೆಗಾಗಿ ಮೆಕ್ಕೆಜೋಳ ಖರೀದಿ ಆರಂಭಿಸಿದಾಗ ಕ್ವಿಂಟಲ್‌ಗೆ ₹1,200 ಇದ್ದ ಬೆಲೆ, ಪ್ರಸ್ತುತ ₹3,600 ತಲುಪಿದ್ದು ರೈತರ ಆದಾಯದಲ್ಲಿ ಭಾರಿ ಏರಿಕೆಯಾಗಿದೆ ಎಂದು ಸಚಿವರು ವಿವರಿಸಿದರು.