ನವದೆಹಲಿ : ಭಾರತವು ಪ್ರಸ್ತುತ ಎರಡು ಪ್ರಮುಖ ಹವಾಮಾನ ಬೆದರಿಕೆಗಳನ್ನು ಎದುರಿಸುತ್ತಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಐತಿಹಾಸಿಕವಾಗಿ ಬಲವಾದ ಎಲ್ ನಿನೋ ಸಕ್ರಿಯವಾಗಿದ್ದು, ಇದು ದೇಶದಲ್ಲಿ ಬರ ಮತ್ತು ಕ್ಷಾಮದ ಪರಿಸ್ಥಿತಿಯನ್ನು ಸೃಷ್ಟಿಸುವ ಆತಂಕ ಹುಟ್ಟುಹಾಕಿದೆ. ಮತ್ತೊಂದೆಡೆ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಸ್ಥಿರವಾಗಿ ಬಲಗೊಳ್ಳುತ್ತಿದ್ದು, ಇದು ಆಳವಾದ ವಾಯುಭಾರ ಕುಸಿತವಾಗಿ ಬೆಳೆದರೆ 'ಅರ್ನಾಬ್' ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತದ ಹೆಸರನ್ನು ಬಾಂಗ್ಲಾದೇಶ ಸೂಚಿಸಿದೆ. ಪ್ರಸ್ತುತ ಬಂಗಾಳಕೊಲ್ಲಿಯ ಪ್ರಕ್ಷುಬ್ಧತೆಯು ಪೂರ್ಣಪ್ರಮಾಣದ ಚಂಡಮಾರುತವಾಗುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಗಂಟೆಗೆ 75 ಕಿಲೋಮೀಟರ್‌ವರೆಗಿನ ಗರಿಷ್ಠ ವೇಗದ ಗಾಳಿ ಹಾಗೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಐಎಂಡಿ ವರದಿಯ ಪ್ರಕಾರ, ಉತ್ತರ ಅಂಡಮಾನ್ ಸಮುದ್ರದಲ್ಲಿ ರೂಪುಗೊಂಡ ಮೇಲ್ಮಟ್ಟದ ವಾಯು ಚಂಡಮಾರುತದ ಪ್ರಭಾವದಿಂದಾಗಿ ಸೆಪ್ಟೆಂಬರ್ 19 ರ ಸಂಜೆ 5:30 ಕ್ಕೆ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣವಾಗಿತ್ತು. ಸೆಪ್ಟೆಂಬರ್ 20 ರ ಬೆಳಿಗ್ಗೆ 8:30 ಕ್ಕೆ ಇದು ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಉತ್ತರ ಅಂಡಮಾನ್ ಸಮುದ್ರದ ಮೇಲೆ ನೆಲೆಗೊಂಡಿತ್ತು. ಈ ವ್ಯವಸ್ಥೆಯು ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುತ್ತಾ ಸೆಪ್ಟೆಂಬರ್ 21 ರಂದು ವಾಯುಭಾರ ಕುಸಿತವಾಗಿ ಹಾಗೂ ಸೆಪ್ಟೆಂಬರ್ 22 ರಂದು ಆಳವಾದ ವಾಯುಭಾರ ಕುಸಿತವಾಗಿ ಬಲಗೊಳ್ಳಲಿದೆ. ತರುವಾಯ ಸೆಪ್ಟೆಂಬರ್ 23 ರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ಬಳಿ ಪಶ್ಚಿಮ-ಮಧ್ಯ ಹಾಗೂ ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪುವ ನಿರೀಕ್ಷೆಯಿದೆ.
ಈ ಹೊಸ ಹವಾಮಾನ ವ್ಯವಸ್ಥೆಯ ಪ್ರಭಾವದಿಂದಾಗಿ ಮುಂದಿನ ಐದರಿಂದ ಆರು ದಿನಗಳ ಕಾಲ ದಕ್ಷಿಣ ಮತ್ತು ಮಧ್ಯ ಭಾರತ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆ ಚಟುವಟಿಕೆ ತೀವ್ರಗೊಳ್ಳಲಿದೆ. ಮುಖ್ಯವಾಗಿ ಸೆಪ್ಟೆಂಬರ್ 23 ಮತ್ತು 24 ರಂದು ದಕ್ಷಿಣ ಒಡಿಶಾ ಮತ್ತು ಉತ್ತರ ಕರಾವಳಿ ಆಂಧ್ರಪ್ರದೇಶದಲ್ಲಿ ಅತ್ಯಂತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಸೆಪ್ಟೆಂಬರ್ 24 ರಂದು ದಕ್ಷಿಣ ಛತ್ತೀಸ್‌ಗಢದ ಪ್ರತ್ಯೇಕ ಪ್ರದೇಶಗಳಲ್ಲೂ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ, ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ (ಸೆಪ್ಟೆಂಬರ್ 22-24), ದಕ್ಷಿಣ ಒಡಿಶಾದಲ್ಲಿ (ಸೆಪ್ಟೆಂಬರ್ 22-25), ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ (ಸೆಪ್ಟೆಂಬರ್ 23-25) ಹಾಗೂ ವಿದರ್ಭದಲ್ಲಿ (ಸೆಪ್ಟೆಂಬರ್ 24-25) ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.