ನವದೆಹಲಿ : ನವದೆಹಲಿಯ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ದಿವಂಗತ ಎ.ಜಿ. ನೂರಾನಿ ಅವರ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ನೀಡಿರುವ ಹೇಳಿಕೆಯೊಂದು ದೇಶದ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಎ.ಜಿ. ನೂರಾನಿ ಅವರ 'ದಿ ಎಸ್ಆರ್ಎಸ್: ಎ ಮೆನೇಸ್ ಟು ಇಂಡಿಯಾ' ಕೃತಿಯನ್ನು ಉಲ್ಲೇಖಿಸಿ ಮಾತನಾಡಿದ ಅನ್ಸಾರಿ, “ಭಾರತಕ್ಕೆ ಕಮ್ಯುನಿಸಂಗಿಂತಲೂ ಹಿಂದೂ ಬಲಪಂಥೀಯ ಕೋಮುವಾದವೇ ಅತ್ಯಂತ ದೊಡ್ಡ ಅಪಾಯ” ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಿಂದೆ ನೀಡಿದ್ದ ಹೇಳಿಕೆಯನ್ನು ನೆನಪಿಸಿದರು. ಇದರೊಂದಿಗೆ ದೇಶದಲ್ಲಿ ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ರಾಷ್ಟ್ರೀಯತೆಯ ವ್ಯಾಖ್ಯಾನಕ್ಕೆ ಧಕ್ಕೆಯಾಗುತ್ತಿದ್ದು, ಧರ್ಮದ ಆಧಾರದಲ್ಲಿ ನಾಗರಿಕರನ್ನು ವಿಂಗಡಿಸುವ ಯತ್ನಗಳು ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮಾಜಿ ಉಪರಾಷ್ಟ್ರಪತಿಯವರ ಈ ಉಲ್ಲೇಖಕ್ಕೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಕಟು ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ. ಅನ್ಸಾರಿ ಅವರ ಪ್ರಚೋದನಕಾರಿ ಹೇಳಿಕೆಗಳು ದೇಶದ ಸನಾತನ ಸಂಪ್ರದಾಯವನ್ನು ಅಗೌರವಿಸುವಂತಿದ್ದು, ಭಾರತದ ಜಾಗತಿಕ ಪ್ರತಿಷ್ಠೆಯನ್ನು ಹಾಳುಮಾಡಲು ಯತ್ನಿಸುತ್ತಿರುವ ಭಾರತ ವಿರೋಧಿ ಪಡೆಗಳ ಕಾರ್ಯಸೂಚಿಗೆ ನೀರೆರೆಯುವಂತಿವೆ ಎಂದು ಸಿಎಂ ಯೋಗಿ ಟೀಕಿಸಿದ್ದಾರೆ. ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಈ ರೀತಿ ಮಾತನಾಡುವುದು ದುರದೃಷ್ಟಕರ ಹಾಗೂ ಭೀತಿಕರ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅನ್ಸಾರಿ ಅವರ ಈ ನಡೆ ಹಿಂದೂ ವಿರೋಧಿ ಪ್ರಚಾರದ ಭಾಗವಾಗಿದ್ದು, ದೇಶದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಹಳೆಯ ನಿಲುವುಗಳನ್ನು ಮರುಸ್ಥಾಪಿಸುವ ಯತ್ನ ಎಂದು ಬಿಜೆಪಿ ಖಂಡಿಸಿದೆ.
ರಾಜಕೀಯ ನಾಯಕರಷ್ಟೇ ಅಲ್ಲದೆ, ಪ್ರಮುಖ ಮುಸ್ಲಿಂ ಧರ್ಮಗುರು ಹಾಗೂ ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥರಾದ ಡಾ. ಉಮೈರ್ ಅಹ್ಮದ್ ಇಲ್ಯಾಸಿ ಕೂಡ ಅನ್ಸಾರಿ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನ್ಸಾರಿ ಅವರು ಅನಗತ್ಯವಾಗಿ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಸ್ತುತ ದೇಶದಲ್ಲಿರುವ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಯತ್ನಗಳನ್ನು ಭಾರತೀಯ ಮುಸ್ಲಿಮರು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಭಾರತದ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ 'ರಾಷ್ಟ್ರೀಯತೆ' ಮತ್ತು 'ಜಾತ್ಯತೀತತೆ' ಕುರಿತ ಚರ್ಚೆಗಳನ್ನು ಹಳೆಯ ಹೇಳಿಕೆಗಳ ಮೂಲಕ ಮುನ್ನೆಲೆಗೆ ತರುವುದು ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.