ಪಶ್ಚಿಮ ಬಂಗಾಳ : ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ರೂಪಿಸಿದ್ದ 'ಇಂಡಿಯಾ' ಒಕ್ಕೂಟವು ಛಿದ್ರಗೊಂಡಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ನಲ್ಲೂ (ಟಿಎಂಸಿ) ತೀವ್ರ ವಿಭಜನೆ ಕಂಡುಬರುತ್ತಿದೆ. ಮುಂಬರುವ ದುರ್ಗಾ ಪೂಜೆಗೂ ಮುನ್ನ 17 ಸಂಸದರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಟಿಎಂಸಿಯ ಬಂಡಾಯ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ತಿಳಿಸಿದ್ದು, ಇದು ಪಶ್ಚಿಮ ಬಂಗಾಳ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲು ಕಂಡ ಬಳಿಕ ಪಕ್ಷದಲ್ಲಿ ಬಂಡಾಯಗಾರರ ಸಂಖ್ಯೆ ಹೆಚ್ಚಾಗಿತ್ತು. ಆರಂಭದಲ್ಲಿ 27 ಸಂಸದರನ್ನು ಹೊಂದಿದ್ದ ಟಿಎಂಸಿಯಿಂದ 20 ಮಂದಿ ಹೊರಬಂದು ತ್ರಿಪುರಾದ ರಾಷ್ಟ್ರೀಯ ನಾಗರಿಕ ಪಕ್ಷಕ್ಕೆ (ಎನ್ಸಿಪಿಐ) ಸೇರ್ಪಡೆಯಾಗಿದ್ದರು. ಇದೀಗ ಆ 20 ಸಂಸದರ ಪೈಕಿ 17 ಮಂದಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ ಎಂದು ಬಸುನಿಯಾ ಪ್ರತಿಪಾದಿಸಿದ್ದಾರೆ. ಒಟ್ಟು 20 ಸದಸ್ಯರಲ್ಲಿ ಮೂರನೇ ಎರಡರಷ್ಟು ನಾಯಕರು ಒಟ್ಟಾಗಿ ಪಕ್ಷ ಬದಲಾಯಿಸುತ್ತಿರುವುದರಿಂದ ಇವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ. ಉಳಿದ ಮೂವರು ಅಲ್ಪಸಂಖ್ಯಾತ ಸಮುದಾಯದ ಸಂಸದರು ನೇರವಾಗಿ ಬಿಜೆಪಿಗೆ ಸೇರದಿದ್ದರೂ, ಹೊರಗಿನಿಂದ ಎನ್ಡಿಎಗೆ ಬೆಂಬಲ ನೀಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಬಸುನಿಯಾ ಅವರ ಈ ಹೇಳಿಕೆಯನ್ನು ಇತರ ಬಂಡಾಯ ನಾಯಕರು ತಕ್ಷಣವೇ ತಳ್ಳಿಹಾಕಿದ್ದಾರೆ. ಮತ್ತೊಬ್ಬ ಬಂಡಾಯ ಸಂಸದೆ ಶತಾಬ್ದಿ ರಾಯ್ ಮಾತನಾಡಿ, ಬಸುನಿಯಾ ನೀಡಿದ್ದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಇದು ಯಾವುದೇ ಸಂಸದರ ಜಂಟಿ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಎನ್ಸಿಪಿಐ ಸಂಸದ ಅಬು ತೆಹರ್ ಖಾನ್ ಕೂಡ ಪ್ರತಿಕ್ರಿಯಿಸಿ, ತಾವು ಯಾರೂ ಬಿಜೆಪಿಗೆ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬಂಡಾಯ ಸಂಸದರ ಬಣದಲ್ಲೇ ಭಿನ್ನಾಭಿಪ್ರಾಯ ಮೇಲ್ನೋಟಕ್ಕೆ ವ್ಯಕ್ತವಾಗಿದೆ.