ಪಟ್ನಾ: ಮುಸ್ಲಿಮರು ಯಾವುದೇ ರಾಜಕೀಯ ಪಕ್ಷದ ಕುರುಡು ಹಿಂಬಾಲಕರಾಗದೆ, ಪ್ರಜಾಪ್ರಭುತ್ವದಲ್ಲಿ ತಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ನ್ಯಾಯಯುತ ಹಕ್ಕುಗಳಿಗಾಗಿ ಸ್ವತಃ ಹೋರಾಡಬೇಕು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕರೆ ನೀಡಿದ್ದಾರೆ.
ರಾಜಧಾನಿಯ ಸಬ್ಜಿಬಾಗ್ನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಪಕ್ಷವನ್ನು ಕುರುಡಾಗಿ ಬೆಂಬಲಿಸುವ ಬದಲು ರಾಜಕೀಯದಲ್ಲಿ ತಮ್ಮ ಸರಿಯಾದ ಪಾಲು ಪಡೆದುಕೊಳ್ಳಲು ಅಲ್ಪಸಂಖ್ಯಾತರು ಮುಂಚೂಣಿಗೆ ಬರಬೇಕು ಎಂದರು. ಇತ್ತೀಚೆಗೆ ನಡೆದ ಬಾಂಕಿಪುರ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಮುಸ್ಲಿಂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕಿಶೋರ್, ಸಮುದಾಯಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸ್ವತಃ ಕಾಳಜಿ ವಹಿಸಬೇಕು ಹಾಗೂ ತಮ್ಮ ಹಿತ ಕಾಯುವುದಾಗಿ ಹೇಳಿಕೊಳ್ಳುವ ನಾಯಕರ ಮಾತುಗಳಿಗೆ ಮರುಳಾಗಬಾರದು ಎಂದು ಹೇಳಿದರು.
ಬಿಜೆಪಿ ಸತತವಾಗಿ ಗೆಲ್ಲುತ್ತಿದ್ದ ಬಾಂಕಿಪುರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಿಶೋರ್ ಗೆಲುವು ಸಾಧಿಸಿದ್ದರು. ಈ ಹಿಂದೆ ಆರ್ಜೆಡಿಯ ಬೆಂಬಲಿಗರಾಗಿದ್ದ ನಗರದ ಮುಸ್ಲಿಂ ಮತದಾರರು ಈ ಉಪಚುನಾವಣೆಯಲ್ಲಿ ಕಿಶೋರ್ ಪರ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು.
ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂಟೂ ಸ್ಥಾನಗಳಲ್ಲೂ ಜನ ಸುರಾಜ್ ಸ್ಪರ್ಧಿಸಲಿದೆ ಎಂದು ಹೇಳಿದ ಕಿಶೋರ್, ಆರ್ಜೆಡಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನೂ ತೀವ್ರವಾಗಿ ಟೀಕಿಸಿದರು. "ಪಟ್ಟಿಯಲ್ಲಿ ಪಕ್ಷ ಬದಲಿಸಿ ಬಂದವರೇ ಹೆಚ್ಚಿದ್ದಾರೆ. ಹಣ ನೀಡಿದವರಿಗಷ್ಟೇ ಟಿಕೆಟ್ ನೀಡಿದಂತಿದೆ" ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮಸ್ಥಳ ಬಖ್ತಿಯಾರ್ಪುರಕ್ಕೆ ಅವರ ಹೆಸರಿಡುವ ಪ್ರಸ್ತಾವನೆಯನ್ನು ಟೀಕಿಸಿದ ಅವರು, "ಬಿಹಾರದಲ್ಲಿ ಈಗ ಅಭಿವೃದ್ಧಿ ಕೆಲಸಗಳಿಗಿಂತ ಸ್ಥಳಗಳ ಹೆಸರು ಬದಲಿಸುವ ವಿಚಾರದ ಸದ್ದು ಹೆಚ್ಚಾಗಲಿದೆ" ಎಂದರು. ಜೆಡಿಯು ಹೆಸರನ್ನು 'ಜೆಡಿಯು-ನಿತೀಶ್' ಎಂದು ಬದಲಿಸುವ ಚರ್ಚೆಯ ಕುರಿತು ಪ್ರತಿಕ್ರಿಯಿಸಿ, "ಹೆಸರು ಏನೇ ಇರಲಿ, ಇಂದಿನ ವಾಸ್ತವವೆಂದರೆ ಈ ಪಕ್ಷವನ್ನು ನಿತೀಶ್ ಕುಮಾರ್ ನಡೆಸುತ್ತಿಲ್ಲ; ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.