ನವದೆಹಲಿ: ಭಾರತದಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಮುಗಿಸಿ ನಿರ್ಗಮಿಸುತ್ತಿದ್ದಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ತೈವಾನ್ ವಿಚಾರದಲ್ಲಿ ಕಠಿಣ ಸವಾಲೊಂದನ್ನು ಒಡ್ಡಿದ್ದಾರೆ. ತೈವಾನ್ಗೆ ಅಮೆರಿಕ ಹೊಸ ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದಕ್ಕೆ ಅನುಮೋದನೆ ನೀಡಿದರೆ, ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ನಿಗದಿಯಾಗಿರುವ ಉಭಯ ನಾಯಕರ ಸಭೆಯನ್ನು ರದ್ದುಗೊಳಿಸುವುದಾಗಿ ಚೀನಾ ಸೂಚನೆ ನೀಡಿದೆ ಎಂದು ಜಪಾನಿನ 'ಕ್ಯೋಡೋ ನ್ಯೂಸ್' ವರದಿ ಮಾಡಿದೆ.
ಏಳು ವರ್ಷಗಳ ನಂತರ ಭಾರತಕ್ಕೆ ಮೊದಲ ಭೇಟಿ ನೀಡಿದ್ದ ಕ್ಸಿ ಜಿನ್ಪಿಂಗ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ನವದೆಹಲಿಯಿಂದ ನಿರ್ಗಮಿಸಿದರು. ಆದರೆ, ಭಾರತದಿಂದ ನಿರ್ಗಮಿಸಿದ ತಕ್ಷಣ ಹೊರಹೊಮ್ಮಿದ ತೈವಾನ್ ಕುರಿತ ಸುದ್ದಿ ವಿಶ್ವದ ಗಮನವನ್ನು ಸೆಳೆದಿದೆ. ತೈವಾನ್ ವಿಚಾರವು ತನಗೆ ಅತ್ಯಂತ ಸೂಕ್ಷ್ಮ ಹಾಗೂ "ರೆಡ್ ಲೈನ್" (ಅತಿಕ್ರಮಿಸಬಾರದ ಗೆರೆ) ಎಂದು ಚೀನಾ ಸ್ಪಷ್ಟಪಡಿಸಿದ್ದು, ಈ ವಿಚಾರದಲ್ಲಿ ವಾಷಿಂಗ್ಟನ್ ಕೈಗೊಳ್ಳುವ ನಡೆ ಚೀನಾ-ಅಮೆರಿಕ ಸಂಬಂಧಗಳ ದಿಸೆಯನ್ನು ನಿರ್ಧರಿಸಲಿದೆ.
ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕ್ಸಿ ಜಿನ್ಪಿಂಗ್ ನಡುವೆ ಭೇಟಿ ನಿಗದಿಯಾಗಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಇಬ್ಬರೂ ನಾಯಕರ ನಡುವೆ ನಡೆಯಲಿರುವ ಮೂರನೇ ಮಹತ್ವದ ಸಭೆಯಾಗಲಿದೆ. ಆದರೆ, ತೈವಾನ್ಗೆ ಅಮೆರಿಕ ನೀಡಲು ಉದ್ದೇಶಿಸಿರುವ ನೂತನ ಶಸ್ತ್ರಾಸ್ತ್ರ ವ್ಯವಹಾರವು ಈ ಉನ್ನತ ಮಟ್ಟದ ಭೇಟಿಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ. ಒಂದು ವೇಳೆ ಅಮೆರಿಕ ಈ ಒಪ್ಪಂದಕ್ಕೆ ಅನುಮೋದನೆ ನೀಡಿದರೆ, ಶೃಂಗಸಭೆಯಿಂದ ಹಿಂದೆ ಸರಿಯುವುದಾಗಿ ಬೇಜಿಂಗ್ ಎಚ್ಚರಿಸಿದೆ. ಆದಾಗ್ಯೂ, ಈ ಬೆದರಿಕೆ ಅಥವಾ ಶಸ್ತ್ರಾಸ್ತ್ರ ಒಪ್ಪಂದದ ಕುರಿತು ಅಮೆರಿಕ ಅಥವಾ ಚೀನಾ ಅಧಿಕೃತವಾಗಿ ಯಾವುದೇ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿಲ್ಲ.
ತೈವಾನ್ ಅನ್ನು ತನ್ನ ಭೂಭಾಗವೆಂದು ಪರಿಗಣಿಸಿರುವ ಚೀನಾ, ಅಗತ್ಯಬಿದ್ದರೆ ಸೇನಾ ಬಲ ಬಳಸಿ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಇನ್ನೊಂದೆಡೆ, ಯುನೈಟೆಡ್ ಸ್ಟೇಟ್ಸ್ ತೈವಾನ್ನ ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಪಾಲುದಾರನಾಗಿದ್ದು, ಶಸ್ತ್ರಾಸ್ತ್ರ ಪೂರೈಸಿದರೆ ಅದನ್ನು ಚೀನಾ ತನ್ನ ಸಾರ್ವಭೌಮತ್ವ ಮತ್ತು ಭದ್ರತೆಗೆ ಎದುರಾದ ನೇರ ಬೆದರಿಕೆ ಎಂದು ಭಾವಿಸುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ತೈವಾನ್ಗೆ ಶಸ್ತ್ರಾಸ್ತ್ರ ನೀಡಬೇಕೇ ಅಥವಾ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಮಹತ್ವದ ಸಭೆಯನ್ನು ಉಳಿಸಿಕೊಳ್ಳಬೇಕೇ ಎಂಬ ಪ್ರಮುಖ ರಾಜತಾಂತ್ರಿಕ ಧರ್ಮಸಂಕಟ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿದೆ.