image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉಕ್ರೇನ್‌ಗೆ ಯುರೋಪ್ ಸೈನ್ಯ ಕಳುಹಿಸಿದರೆ ರಷ್ಯಾ ವಿರುದ್ಧದ ನೇರ ಯುದ್ಧ: ಭಾರತದ ನೆಲದಿಂದ ನ್ಯಾಟೋಗೆ ಪುಟಿನ್ ಕಠಿಣ ಎಚ್ಚರಿಕೆ

ಉಕ್ರೇನ್‌ಗೆ ಯುರೋಪ್ ಸೈನ್ಯ ಕಳುಹಿಸಿದರೆ ರಷ್ಯಾ ವಿರುದ್ಧದ ನೇರ ಯುದ್ಧ: ಭಾರತದ ನೆಲದಿಂದ ನ್ಯಾಟೋಗೆ ಪುಟಿನ್ ಕಠಿಣ ಎಚ್ಚರಿಕೆ

ನವದೆಹಲಿ : ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಹಾಗೂ ನ್ಯಾಟೋ ಬಣಕ್ಕೆ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಯುರೋಪಿಯನ್ ರಾಷ್ಟ್ರಗಳು ಉಕ್ರೇನಿಯನ್ ನೆಲಕ್ಕೆ ತಮ್ಮ ಸೈನ್ಯವನ್ನು ರವಾನಿಸಿದರೆ, ಅದನ್ನು ರಷ್ಯಾ ವಿರುದ್ಧದ ನೇರ ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ಪಾಶ್ಚಿಮಾತ್ಯ ಪಡೆಗಳ ನಿಯೋಜನೆಯನ್ನು ಕೇವಲ ನೆರವು ಅಥವಾ ಶಾಂತಿಪಾಲನಾ ಕಾರ್ಯಾಚರಣೆಯಾಗಿ ರಷ್ಯಾ ನೋಡುವುದಿಲ್ಲ; ಬದಲಿಗೆ ಅದನ್ನು ಮಾಸ್ಕೋ ವಿರುದ್ಧದ ನೇರ ಯುದ್ಧ ಪ್ರವೇಶ ಎಂದೇ ವ್ಯಾಖ್ಯಾನಿಸಲಾಗುವುದು ಎಂದು ಪುಟಿನ್ ಪ್ರತಿಪಾದಿಸಿದ್ದಾರೆ. ಪಾಶ್ಚಿಮಾತ್ಯ ಪಡೆಯ ಈ ನಡೆ ರಷ್ಯಾದ ಅತ್ಯಂತ ಪ್ರಮುಖ 'ಕೆಂಪು ರೇಖೆ'ಯನ್ನು (Red Line) ದಾಟಿದಂತೆ ಎಂದು ಅವರು ಎಚ್ಚರಿಸಿದ್ದಾರೆ. ಅದೇ ಸಮಯದಲ್ಲಿ, ಯುರೋಪಿಯನ್ ರಾಷ್ಟ್ರಗಳಿಗೆ ಯಾವುದೇ ಬೆದರಿಕೆ ಒಡ್ಡುವ ಉದ್ದೇಶ ರಷ್ಯಾಕ್ಕಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಯುರೋಪಿನ ನಾಯಕರು ರಷ್ಯಾದ ಹೆಸರಿನಲ್ಲಿ ಸುಳ್ಳು ಭೀತಿ ಸೃಷ್ಟಿಸಿ ತಮ್ಮ ಜನರನ್ನು ಹೆದರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಮ್ಮ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದ ಪುಟಿನ್, ಉಭಯ ದೇಶಗಳ ನಡುವಿನ ದೀರ್ಘಕಾಲದ ಆಯಕಟ್ಟಿನ ಸಂಬಂಧಗಳನ್ನು ಮತ್ತಷ್ಟು ಆಳವಾಗಿಸಲು ಒಪ್ಪಿಕೊಂಡರು. ಇದರೊಂದಿಗೆ ಬ್ರಿಕ್ಸ್ ಉದ್ಯಮ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ನಿಯಮಗಳ ಹೊರತಾಗಿ ಜಾಗತಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಹೊಸ ವೇದಿಕೆಗಳ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಆರ್ಕ್ಟಿಕ್ ಸಾರಿಗೆ ಕಾರಿಡಾರ್ ಹಾಗೂ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ಗಳಂತಹ ಮಹತ್ವದ ಮೂಲಸೌಕರ್ಯ ಯೋಜನೆಗಳಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಕೈಜೋಡಿಸಲು ರಷ್ಯಾ ಸಂಪೂರ್ಣವಾಗಿ ಸಿದ್ಧವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Category
ಕರಾವಳಿ ತರಂಗಿಣಿ