ಕೊಟ್ಟಾಯಂ : ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಕ್ರಿಸ್ ಗೇಲ್ ಅವರು ಕೇರಳದ ಕೊಟ್ಟಾಯಂ ಜಿಲ್ಲೆಯ ಪುತುಪಲ್ಲಿಗೆ ಭೇಟಿ ನೀಡಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ತಿರುವನಂತಪುರಂನಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ಸುಮಾರು 12.25ಕ್ಕೆ ಆಗಮಿಸಿದ ಗೇಲ್ ಅವರನ್ನು ಪುತುಪಲ್ಲಿ ಶಾಸಕ ಹಾಗೂ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್, ಸಹೋದರಿ ಮರಿಯಾ ಉಮ್ಮನ್ ಮತ್ತು ಪಂಚಾಯತ್ ಪ್ರತಿನಿಧಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ತರುವಾಯ, ಶಾಸಕ ಚಾಂಡಿ ಉಮ್ಮನ್ ತಾವೇ ಕಾರು ಚಲಾಯಿಸಿಕೊಂಡು ಗೇಲ್ ಅವರನ್ನು ಪುತುಪಲ್ಲಿ ಚರ್ಚ್‌ಗೆ ಕರೆದೊಯ್ದರು. ಈ ವೇಳೆ, ಕ್ರಿಸ್ ಗೇಲ್ ಅವರು ಚರ್ಚ್‌ನಲ್ಲಿದ್ದ ಉಮ್ಮನ್ ಚಾಂಡಿ ಅವರ ಸಮಾಧಿಗೆ ಗೌರವಪೂರ್ವಕವಾಗಿ ಪುಷ್ಪಾರ್ಚನೆ ಮಾಡಿದರು.
ಸಮಾಧಿ ದರ್ಶನದ ನಂತರ, ಪುದುಪಲ್ಲಿಯಲ್ಲಿ ನೂತನ ಕ್ರಿಕೆಟ್ ಕ್ರೀಡಾಂಗಣ ಮತ್ತು ಸಾಂಸ್ಕೃತಿಕ ಕೇಂದ್ರದ ನಿರ್ಮಾಣ ಕುರಿತು ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗೇಲ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (KCA) ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.