ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಹಾಗೂ ತೃತೀಯಲಿಂಗಿಗಳ ಆರ್ಥಿಕ ಸ್ವಾವಲಂಬನೆಗಾಗಿ 'ವೆಟ್ರಿ ಪಯಣಂ' ಹೆಸರಿನಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸಲಾಗಿದ್ದು, ಇದು ಗಾಂಧಿ ಜಯಂತಿಯಾದ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ. ಮೆಟ್ರೋಪಾಲಿಟನ್ ಹಾಗೂ ನಗರ ಪ್ರದೇಶಗಳ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡೀಲಕ್ಸ್ ಬಸ್‌ಗಳಲ್ಲೂ ಮಹಿಳೆಯರು ಹಾಗೂ ತೃತೀಯಲಿಂಗಿಗಳು ಉಚಿತವಾಗಿ ಪ್ರಯಾಣಿಸಬಹುದು. ಜೊತೆಗೆ ಜಿಲ್ಲೆಗಳ ನಡುವೆ ಸಂಚರಿಸುವ ಸಾಮಾನ್ಯ ದರದ ಬಸ್‌ಗಳು, ಮೋಫುಸಿಲ್ ಹಾಗೂ ಗುಡ್ಡಗಾಡು ಪ್ರದೇಶಗಳ ಬಸ್‌ಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಈ ಯೋಜನೆಗೆ ಯಾವುದೇ ಆದಾಯ ಮಿತಿ ಅಥವಾ ಪ್ರಯಾಣದ ಸಂಖ್ಯೆಯ ಮಿತಿ ಇರುವುದಿಲ್ಲ ಹಾಗೂ ಇದರಿಂದ ಸರ್ಕಾರಕ್ಕೆ ವಾರ್ಷಿಕ ₹6,000 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
ಮತ್ತೊಂದೆಡೆ, 'ಅನ್ನಪೂರ್ಣಿ ಸೂಪರ್ ಸಿಕ್ಸ್' ಯೋಜನೆಯಡಿ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರುವ ಸುಮಾರು 1.30 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು. ಸಿಲಿಂಡರ್ ಖರೀದಿಗೆ ಬೇಕಾದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. 2027ರ ಪೊಂಗಲ್‌ನಿಂದ ಈ ಯೋಜನೆ ಜಾರಿಗೆ ಬರಲಿದ್ದು, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹4,000 ಕೋಟಿ ಹೊರೆ ಬೀಳಲಿದೆ. ರೈತರು ಹಾಗೂ ಸ್ಥಳೀಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಜನರು ನಿರಾಶ್ರಿತರಾಗದಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿರುವ ಅವರು, ಪ್ರಸ್ತುತ ಚೆನ್ನೈನ ಮೀಣಂಬಾಕ್ಕಂ ವಿಮಾನ ನಿಲ್ದಾಣದಲ್ಲೇ 'ಟರ್ಮಿನಲ್-5' ನಿರ್ಮಿಸುವುದಾಗಿ ಪ್ರಕಟಿಸಿದ್ದಾರೆ.