ನವದೆಹಲಿ : ದೇಶದಲ್ಲಿ ವಿಮಾನ ಟಿಕೆಟ್ ದರ, ಸರ್ಜ್ ಪ್ರೈಸಿಂಗ್ ಹಾಗೂ ಹೆಚ್ಚುವರಿ ಲಗೇಜ್ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸರ್ಕಾರ ನಿಗದಿಪಡಿಸಿರುವ ದರ ನಿಯಮಗಳನ್ನು ಪಾಲಿಸದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯವಿದ್ದರೆ ಅಂತಹ ಸಂಸ್ಥೆಗಳ ಸೇವೆಗಳನ್ನೇ ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದೇ ವೇಳೆ, ವಿಮಾನ ದರಗಳಿಗೆ ಸಂಬಂಧಿಸಿದ ಅಂತಿಮ ನಿಯಮಗಳನ್ನು ಮೂರು ವಾರಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಪ್ರಸ್ತಾಪಿತ ಹೊಸ ನಿಯಮಗಳ ಕರಡನ್ನು ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನಿಯಮ ರೂಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಹೊಸ ನಿಯಮಗಳು ಜಾರಿಗೆ ಬರುವವರೆಗೆ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿ ಮೆಮೊಗಳನ್ನು ಮಾರ್ಗಸೂಚಿಯಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
ಪ್ರಸ್ತುತ ನಿಯಮಗಳನ್ನು ಹಲವು ಸಂಸ್ಥೆಗಳು ಪಾಲಿಸುತ್ತಿಲ್ಲ ಎಂದು ಅರ್ಜಿದಾರರು ಗಮನ ಸೆಳೆದಾಗ, ಜಸ್ಟಿಸ್ ವಿಕ್ರಮ್ ನಾಥ್ ಹಾಗೂ ಜಸ್ಟಿಸ್ ಸಂದೀಪ್ ಮೆಹ್ತಾ ಅವರ ಪೀಠವು ನಿಯಮ ಉಲ್ಲಂಘಿಸುವವರ ವಿರುದ್ಧ ದಯೆ ತೋರದೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಿತು. ಸಾಮಾಜಿಕ ಕಾರ್ಯಕರ್ತ ಎಸ್. ಲಕ್ಷ್ಮೀನಾರಾಯಣನ್ ಸಲ್ಲಿಸಿರುವ ಅರ್ಜಿಯಲ್ಲಿ ಟಿಕೆಟ್ ದರ ನಿಯಂತ್ರಣ, ಸರ್ಜ್ ಪ್ರೈಸಿಂಗ್, ಲಗೇಜ್ ಶುಲ್ಕ ಹಾಗೂ ಮರುಪಾವತಿ ನಿಯಮಗಳ ಮೇಲೆ ಕಡ್ಡಾಯ ನಿಯಂತ್ರಣ ತರಲು ಮತ್ತು ಸ್ವತಂತ್ರ ವಿಮಾನಯಾನ ನಿಯಂತ್ರಣ ಸಂಸ್ಥೆ ಸ್ಥಾಪಿಸಲು ಮನವಿ ಮಾಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 7ರಂದು ನಡೆಯಲಿದೆ.