image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮಮಂದಿರ ದೇಣಿಗೆ ಅಕ್ರಮ: ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ಮಾತ್ರ ಉತ್ತರದಾಯಿ

ರಾಮಮಂದಿರ ದೇಣಿಗೆ ಅಕ್ರಮ: ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ಮಾತ್ರ ಉತ್ತರದಾಯಿ

ನವದೆಹಲಿ : ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಹರಿದುಬಂದ ದೇಣಿಗೆಯ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸುಪ್ರೀಂ ಕೋರ್ಟ್‌ಗೆ ಉತ್ತರದಾಯಿಯೇ ಹೊರತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗಲ್ಲ ಎಂದು ಸುಪ್ರೀಂ ಕೋರ್ಟ್  ಸ್ಪಷ್ಟಪಡಿಸಿದೆ. ಈ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನ್ಯಾಯಾಲಯವು ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು. ದೇಣಿಗೆ ಹಣ ದುರುಪಯೋಗದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಪ್ರಸ್ತುತ ಇರುವ ಟ್ರಸ್ಟ್ ಅನ್ನು ವಿಸರ್ಜಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಆದರೆ, ಈ ಕುರಿತು ಮೌಖಿಕ ಅವಲೋಕನ ನಡೆಸಿದ ಪೀಠವು, ಎಸ್‌ಐಟಿ ನ್ಯಾಯಾಲಯದ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಚ್ಚಿದ ಲಕೋಟೆಯಲ್ಲಿ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿಸಿದೆ.

ಇದೇ ವಿಚಾರಣೆಯಲ್ಲಿ ನಿರ್ಮೋಹಿ ಅಖಾಡದ ಪರ ಹಾಜರಿದ್ದ ವಕೀಲರು, ಹಾಲಿ ಟ್ರಸ್ಟ್‌ನಲ್ಲಿ ಸಮಸ್ಯೆಗಳಿದ್ದು ಅದನ್ನು ಸಾರ್ವಜನಿಕ ಟ್ರಸ್ಟ್ ಆಗಿ ಪರಿವರ್ತಿಸಬೇಕೆಂದು ವಾದಿಸಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ತನಿಖೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಗೊಳಿಸಲು ಅರ್ಜಿದಾರರು ಮತ್ತು ಸಾರ್ವಜನಿಕರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕಚೇರಿಯ ಮೂಲಕ ಎಸ್‌ಐಟಿಗೆ ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಎಂದು ಸೂಚನೆ ನೀಡಿದೆ. ಜೊತೆಗೆ ಭವಿಷ್ಯದಲ್ಲಿ ದೇಣಿಗೆ ಹಣದ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಸುಧಾರಣಾ ಮಾರ್ಗಸೂಚಿಗಳನ್ನು ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಪೀಠ ತಿಳಿಸಿದೆ.

Category
ಕರಾವಳಿ ತರಂಗಿಣಿ