ಬಂಟವಾಳ : ಬಂಟವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಗ್ರಾಮದ ಆಲಂಪುರಿ ಸಾಲು ಮರದ ತಿಮ್ಮಕ್ಕ ರಾಷ್ಟ್ರೀಯ ಉದ್ಯಾನವನದ ರಸ್ತೆಯ ಬಳಿ ಅಕ್ರಮವಾಗಿ ನಿಷೇಧಿತ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ 12.08.2026 ರಂದು ಬಂಟವಾಳ ಎ.ಎಸ್.ಪಿ ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ಸುಮಾರು 2 ಲಕ್ಷ 25 ಸಾವಿರ ರೂಪಾಯಿ ಮೌಲ್ಯದ 22.57 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಹಾಗೂ 30.34 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ವಲಚ್ಚಿಲ್ ನಿವಾಸಿ ನಾಸೀರ್ ಹುಸೇನ್ (37), ಬಂಟವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಪ್ರಾಥಮಿಕ ಶಾಲೆ ಬಳಿಯ ನಿವಾಸಿ ಮಹಮ್ಮದ್ ಜುನೇದ್ (38) ಹಾಗೂ ಮಂಗಳೂರಿನ ಕಂಕನಾಡಿ ನಿವಾಸಿ ಮೊಹಮ್ಮದ್ ಅಫ್ರೀದಿ (24) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಡ್ರಗ್ಸ್ ಸಾಗಾಟಕ್ಕೆ ಬಳಸಲಾದ 2 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು (KA 19 MF 1227) ಹಾಗೂ 5 ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 4 ಲಕ್ಷ 90 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಅವರ ಮಾರ್ಗದರ್ಶನದಲ್ಲಿ, ಬಂಟವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಕೆ.ವಿ., ಪಿಎಸ್ಐ ರನ್ನ ಗೌಡ ಎಸ್. ಪಾಟೀಲ್ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.