ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ 3 ದಿನಗಳೊಳಗೆ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 24 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 03.08.2026 ರಂದು ಮಧ್ಯಾಹ್ನ ಮನೆ ಬಾಡಿಗೆಗೆ ಮಾತನಾಡುವ ಸಲುವಾಗಿ ಬಾಗಿಲು ತೆರೆಸಿದ್ದ ಆರೋಪಿಗಳು, ಬಲವಂತವಾಗಿ ಒಳನುಗ್ಗಿ 76 ವರ್ಷದ ವೃದ್ಧೆಯನ್ನು ಕೆಳಕ್ಕೆ ತಳ್ಳಿ ಹಲ್ಲೆಗೈದು, ಅವರ ಮೈಯಲ್ಲಿದ್ದ 24 ಗ್ರಾಂ ತೂಕದ ಅಂದಾಜು 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಬಳೆಯನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತಂಡವು ತನಿಖೆ ನಡೆಸಿ, ದಿನಾಂಕ 07.08.2026 ರಂದು ಮರೋಳಿ ಎಂಬಲ್ಲಿ ಆರೋಪಿಗಳಾದ ಬಾಲ ಸುಬ್ರಮಣ್ಯ (49) ಮತ್ತು ಶ್ಯಾಮ್ ಕುಮಾರ್ (33) ಎಂಬುವವರನ್ನು ವಶಕ್ಕೆ ಪಡೆದಿದೆ. ಬಂಧಿತ ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಸುಲಿಗೆ ಹಾಗೂ ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಅಪರಿಚಿತರು ಬಂದಾಗ ಎಚ್ಚರಿಕೆ ವಹಿಸುವಂತೆ ಹಾಗೂ ಒಂಟಿ ಮಹಿಳೆಯರು ವಾಸಿಸುವ ಮನೆಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.