image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿಯ ಜಂತರ್ ಮಂತರ್‌ನಲ್ಲಿ ದಾಳಿಗೆ ಸಂಚು: 9 ಶಂಕಿತ ಉಗ್ರರನ್ನು ಬಂಧಿಸಿದ ಪಂಜಾಬ್ ಪೊಲೀಸ್

ದೆಹಲಿಯ ಜಂತರ್ ಮಂತರ್‌ನಲ್ಲಿ ದಾಳಿಗೆ ಸಂಚು: 9 ಶಂಕಿತ ಉಗ್ರರನ್ನು ಬಂಧಿಸಿದ ಪಂಜಾಬ್ ಪೊಲೀಸ್

ಪಂಜಾಬ್‌ : ಪಂಜಾಬ್‌ನಲ್ಲಿ ಪಾಕಿಸ್ತಾನದ ಐಎಸ್‌ಐ (ISI) ಬೆಂಬಲಿತ ಎರಡು ಗಡಿಯಾಚೆಗಿನ ಭಯೋತ್ಪಾದನಾ ಮಾಡ್ಯೂಲ್‌ಗಳನ್ನು ಅಮೃತಸರ ಕಮಿಷನರೇಟ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ವರು ಬಾಲಾಪರಾಧಿಗಳು ಸೇರಿದಂತೆ ಒಟ್ಟು ಒಂಬತ್ತು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮಾರಕಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಸಿಜೆಪಿ (CJP) ಪ್ರತಿಭಟನೆಯ ವೇಳೆ ದಾಳಿ ನಡೆಸಲು ಪಾಕಿಸ್ತಾನಿ ಐಎಸ್‌ಐ ನಿರ್ವಾಹಕರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸ್ಥಳೀಯ ಯುವಕರು ಹಾಗೂ ಮೈನರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಬಂಧಿತರನ್ನು ವಂಶ್ ಕುಮಾರ್ (19), ಅನ್ಮೋಲ್ ಸಿಂಗ್ ಅಲಿಯಾಸ್ ಸಾಹಿಲ್ (20), ಹರ್ಮನ್ ಸಿಂಗ್ ಅಲಿಯಾಸ್ ಹಮ್ಮು (24), ಸುಖದೇವ್ ಸಿಂಗ್ (30), ಸುಖ್‌ಮಾನ್ ಸಿಂಗ್ (19) ಮತ್ತು ನಾಲ್ವರು ಬಾಲಾಪರಾಧಿಗಳು ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಮುಖ್ಯ ಆರೋಪಿ ಸುಖ್‌ಮಾನ್ ಸಿಂಗ್, ತಾನು ಪಾಕಿಸ್ತಾನಿ ಐಎಸ್‌ಐ ನಿರ್ವಾಹಕರೊಂದಿಗೆ ನೇರ ಸಂಪರ್ಕದಲ್ಲಿದ್ದುದು ಹಾಗೂ ದೆಹಲಿಯಲ್ಲಿ ದಾಳಿ ನಡೆಸಲು ಅಪ್ರಾಪ್ತ ಸಹಚರರೊಂದಿಗೆ ತೆರಳಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ, ಉತ್ತರ ಪ್ರದೇಶದ ಸಹಚರನಿಂದ ಪೂರೈಕೆಯಾಗಬೇಕಿದ್ದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಬಿಗಿ ಭದ್ರತೆಯ ಕಾರಣದಿಂದ ತಲುಪದಿದ್ದರಿಂದ ಈ ಸಂಚು ವಿಫಲವಾಗಿತ್ತು ಎಂದು ಹೇಳಿದ್ದಾನೆ. ಈ ಕುರಿತು ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿ, "ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿ 3 ಅಕ್ರಮ ಪಿಸ್ತೂಲ್‌ಗಳು, 4 ಪೆಟ್ರೋಲ್ ಬಾಟಲ್ ಬಾಂಬ್‌ಗಳು ಹಾಗೂ 9 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿವೆ. ಇನ್ನು ಎರಡನೇ ಮಾಡ್ಯೂಲ್‌ಗೆ ಪಂಜಾಬ್‌ನ ಪೊಲೀಸ್ ಕಟ್ಟಡಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಕಣ್ಣಿಟ್ಟು ಪರಿಶೀಲನೆ (ರೆಕ್ಕಿ) ನಡೆಸುವ ಕೆಲಸವನ್ನು ವಹಿಸಲಾಗಿತ್ತು," ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ತಿಂಗಳು ರೈಲ್ವೆ ಹಳಿಗಳ ಬಳಿ ಸ್ಥಾಪಿಸಲಾಗಿದ್ದ ಅನುಮಾನಾಸ್ಪದ ಸಿಸಿಟಿವಿ ಕ್ಯಾಮೆರಾಗಳ ತನಿಖೆಯ ಸಮಯದಲ್ಲಿ ಈ ಎರಡನೇ ಮಾಡ್ಯೂಲ್ ಬೆಳಕಿಗೆ ಬಂದಿದೆ. ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ನೇತೃತ್ವದ ತಂಡಗಳು ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಮುಂದಿನ ಸುದೀರ್ಘ ತನಿಖೆ ಮುಂದುವರಿದಿದೆ.

Category
ಕರಾವಳಿ ತರಂಗಿಣಿ