ಬೆಳ್ತಂಗಡಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಳೆದ 2015ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಬಳಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಬೆಳ್ತಂಗಡಿ ವಲಯದ ಸಂಘಟನೆಯ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು. ಈ ಸಭೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(A) ಮತ್ತು 295(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿದ್ದ ತನಿಖಾಧಿಕಾರಿ ರವಿ ಬಿ.ಎಸ್. ಅವರು ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದು ಆರೋಪಿತನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಭಾರತೀಯ ದಂಡ ಸಂಹಿತೆ (IPC) ಕಲಂ 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 10,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಆಶೀತ್ ಅವರು ಸಮರ್ಥವಾಗಿ ವಾದ ಮಂಡನೆ ಮಾಡಿರುತ್ತಾರೆ.