ಸುಳ್ಯ: ಕೆಲಸದ ವಿಚಾರವಾಗಿ ಸುಳ್ಯ ಮೆಸ್ಕಾಂ ಕಂಟ್ರೋಲ್ ರೂಮ್‌ನಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥಗೊಂಡಿರುವ ಘಟನೆ ವರದಿಯಾಗಿದೆ.
ಸುಳ್ಯ ನಿವಾಸಿ ರಾಘವ ಶೆಟ್ಟಿ ಎಂಬವರು ದಿನಾಂಕ 02/08/2026 ರಂದು ಸುಳ್ಯ ಮೆಸ್ಕಾಂ ಕಂಟ್ರೋಲ್ ರೂಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಅದೇ ಕಚೇರಿಯ ಸಹಾಯಕ ಇಂಜಿನಿಯರ್ (AE) ಸುಪ್ರೀತ್ ಎಂಬವರು ಅಲ್ಲಿಗೆ ಆಗಮಿಸಿ ಕೆಲಸದ ಕುರಿತು ತಕರಾರು ತೆಗೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ದೂರುದಾರರ ಮೊಬೈಲ್ ಫೋನ್ ಕಿತ್ತು ನೆಲಕ್ಕೆ ಬಡಿದು ಪುಡಿಮಾಡಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿರುವುದಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರನ್ನು ಸುಳ್ಯ ಠಾಣೆಯಲ್ಲಿ NC: 79/SUL/NCR/2026 ರಂತೆ ಸ್ವೀಕರಿಸಿಕೊಳ್ಳಲಾಗಿತ್ತು. ಬಳಿಕ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ದೂರುದಾರರು ಹಾಗೂ ಎದುರುದಾರರು ಪರಸ್ಪರ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿರುತ್ತಾರೆ.